ನಾನು ನಿಜವಾದ ಹಿಂದೂ, ಆದರೆ ಬಿಜೆಪಿಯ ಹಿಂದುತ್ವ ಸಹಿಸುವುದಿಲ್ಲ

ನಾನು ಹುಟ್ಟಿನಿಂದ ಹಿಂದೂ, ಆದರೆ ಹಿಂದೂಗಳಿಗೆ ಕೆಟ್ಟ ಹೆಸರು ತರುವಂತಹ ಬಿಜೆಪಿ ರೀತಿಯ ಹಿಂದುತ್ವವನ್ನು ಮಾತ್ರ ಸಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬುಧವಾರ ಆಕೆ ಒಡಿಶಾದಲ್ಲಿನ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಕೆಯ ಭೇಟಿಗೆ ದೇವಾಲಯದ ಕೆಲ ಅರ್ಚಕರು ಮತ್ತು ಬಿಜೆಪಿ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಯಿತು. [ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ: ದಿನಕರನ್ ವಿರುದ್ಧ ಲುಕೌಟ್ ನೋಟೀಸ್ ]

ಬೆಂಗಾಲಿಗಳಿಗೆ ಪುರಿ ಜಗನ್ನಾಥನೆಂದರೆ ತುಂಬಾ ನಂಬಿಕೆಯಿದೆ, ಪ್ರತಿ ವರ್ಷ ಇಲ್ಲಿಗೆ ಬರುವ ಭಕ್ತರಲ್ಲಿ ಬೆಂಗಾಲಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ನೆನಪಿಸಿದರು. ತಮ್ಮ ದೇವಾಲಯ ಭೇಟಿಗೆ ಪ್ರತಿಭಟನೆ ವ್ಯಕ್ತಪಡಿಸಿದ ಬಿಜೆಪಿ ಮತ್ತಿತರ ಸಂಘಟನೆಗಳ ವಿರುದ್ಧ ಮಮತಾ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ಇಷ್ಟ ಬಂದಿದ್ದು ಮಾಡಬಹುದು, ಆದರೆ ನನಗೆ ಮಾತ್ರ ಜಗನ್ನಾಥನ ಮೇಲೆ ತುಂಬಾ ನಂಬಿಕೆಯಿದೆ ಎಂದು ಮಮತಾ ಹೇಳಿದರು. ಹಿಂದೂ ಧರ್ಮದಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳುವ ಸಿದ್ಧಾಂತ ಅಡಗಿದೆ ಎಂದರು.

ಹಿಂದೂಗಳೂ ಕೂಡಾ ಗೋಮಾಂಸ ಭಕ್ಷಣೆ ಮಾಡಬಹುದು ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಮಮತಾ ವಿರುದ್ಧ ಬಿಜೆಪಿ ಯುವ ಮೋರ್ಚಾ ದೊಡ್ಡ ಪ್ರತಿಭಟನೆ ನಡೆಸಿತು. ಗೋಮಾಂಸ ಭಕ್ಷಣೆ ಹೇಳಿಕೆ ನೀಡಿದ ಮಮತಾ ಬ್ಯಾನರ್ಜಿಯನ್ನು ದೇವಾಲಯದೊಳಗೆ ಬರಲು ಬಿಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಅವರನ್ನು ಬಂಧಿಸಿದರು. ಒಡಿಶಾ ಸರ್ಕಾರ ಮಮತಾ ಬ್ಯಾನರ್ಜಿಗೆ ಭದ್ರತೆಯನ್ನು ನೀಡಿತ್ತು.