ಇದುವರೆಗೆ ಗಂಡಸರು ಆತ್ಮಹತ್ಯೆ ಮಾಡಿಕೊಂಡಿದ್ದೇ ಈ ಸಚಿವೆಗೆ ಗೊತ್ತಿಲ್ಲವಂತೆ

ನವದೆಹಲಿ: ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವುದು ಈ ಸಚಿವೆಗೆ ಗೊತ್ತೇ ಇಲ್ಲವಂತೆ. ಇಂತಹ ಸುದ್ದಿಗಳನ್ನು ಇದುವರೆಗೂ ಕೇಳಿಯೇ ಇಲ್ಲವಂತೆ. ಹೀಗಂತ ಹೇಳಿ ಆಶ್ಚರ್ಯ ಮೂಡಿಸಿರುವುದು ಬೇರೆ ಯಾರೂ ಅಲ್ಲ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಮೇನಕಾ ಗಾಂಧಿ ನೀಡಿರುವ ಉತ್ತರವಿದು. ಫೇಸ್ಬುಕ್ ಲೈವ್ ನಲ್ಲಿ ಪುರುಷರ ಆತ್ಮಹತ್ಯೆಗಳನ್ನು ಕಡಿಮೆ ಮಾಡಲು ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಯಾವ ಗಂಡಸರು ಆತ್ಮಹತ್ಯೆ ಮಾಡಿಕೊಂಡರು? ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಸಮಸ್ಯೆಗಳನ್ನು ಏಕೆ ಬಗೆಹರಿಸಿಕೊಳ್ಳಬಾರದು ಎಂದು ಪ್ರಶ್ನಿಸಿದ ಮೇನಕಾ, ಇದುವರೆಗೂ ಪುರುಷರ ಒಂದೇ ಒಂದು ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಕೇಳಲಿಲ್ಲ, ಓದಲಿಲ್ಲ ಎಂದರು.

ಆದರೆ ಅಂಕಿಅಂಶಗಳು ಮಾತ್ರ ಬೇರೆಯದ್ದೇ ಹೇಳುತ್ತಿವೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಪ್ರಕಾರ 2015 ರಲ್ಲಿ 1,33,623 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.68 ರಷ್ಟು ಅಂದರೆ 91,528 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ತ್ರೀಯರಲ್ಲಿ 42,088 ಆತ್ಮಹತ್ಯೆಗೆ ಶರಣಾದವರು.