ಮಂಗಳೂರು ಚಲೋ ರ್ಯಾಲಿಗೆ ಸಿಗದ ಅನುಮತಿ, ರ್ಯಾಲಿಗೂ ಮುನ್ನವೇ ಬಂಧನ |News Mirchi

ಮಂಗಳೂರು ಚಲೋ ರ್ಯಾಲಿಗೆ ಸಿಗದ ಅನುಮತಿ, ರ್ಯಾಲಿಗೂ ಮುನ್ನವೇ ಬಂಧನ

ಆರ್.ಎಸ್.ಎಸ್ ಕಾರ್ಯಕರ್ತರ ಹತ್ಯೆಗಳನ್ನು ಖಂಡಿಸಿ ಮತ್ತು ಪಿಎಫ್ಐ, ಕೆ.ಎಫ್.ಡಿ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ರಾಜ್ಯದ ವಿವಿಧ ಭಾಗಗಳಿಂದ ಹಮ್ಮಿಕೊಳ್ಳಲಾಗಿರುವ “ಮಂಗಳೂರು ಚಲೋ” ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ರ್ಯಾಲಿಗೆ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಬೈಕ್ ರ್ಯಾಲಿಗೆ ಸರ್ಕಾರ ಅನುಮತಿ ನೀಡಿಲ್ಲ. ಕೋಲಾರದಲ್ಲಿ ಬೈಕ್ ರ್ಯಾಲಿ ಹೊರಡಲು ಸಿದ್ಧರಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದ ಮಾಜಿ ಶಾಸಕ ವೈ.ಸಂಪಂಗಿ ಅವರನ್ನೂ ಕೆ.ಜಿ.ಎಫ್ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಾದ್ಯಂತ ರ್ಯಾಲಿಗೆ ಪೊಲೀಸರು ನಾಕಾಬಂದಿ ಮಾಡಿದ್ದಾರೆ.

ಇನ್ನು ಬೈಕ್ ರ್ಯಾಲಿ ನಡೆಸಿಯೇ ಸಿದ್ಧ ಎಂದು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದು ಇಂದು ಬೆಳಗ್ಗೆ 10:30ಕ್ಕೆ ರ್ಯಾಲಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಕಾರ ಉದ್ದೇಶಪೂರ್ವಕವಾಗಿಯೇ ರ್ಯಾಲಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಾವೇನು ಭಯೋತ್ಪಾದಕರಲ್ಲ, ಅಶಾಂತಿ ಸೃಷ್ಟಿಯಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಒಟ್ಟಿಗೆ ನಾಲ್ಕು ಬೈಕ್ ಕಂಡರೆ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದ್ದು, ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದವರನ್ನು ಫ್ರೀಡಂ ಪಾರ್ಕ್ ನಲ್ಲಿ ಬಂಧಿಸಿ ಮಧ್ಯಾಹ್ನ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

ಬಿಜೆಪಿಯವರಿಗೆ ರಾಜ್ಯದಲ್ಲಿ ಶಾಂತಿ ನೆಲೆಸೋದು ಬೇಕಿಲ್ಲ, ಅವರಿಗೆ ಚುನಾವಣೆ ಮುಖ್ಯ ಅವರಿಗೆ. ಮಂಗಳೂರಿನಲ್ಲಿ ಶಾಂತಿ ನೆಲೆಸಿದ್ದು, ಅದನ್ನು ಕೆಡಿಸಲು ರಾಜಕೀಯ ಕಾರಣಕ್ಕೆ ರ್ಯಾಲಿ ನಡೆಸಲು ಮುಂದಾಗಿದ್ದಾರೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಶಾಂತಿ ಕದಡುವ ಪ್ರಯತ್ನ ನಡೆಸಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು.

Loading...
loading...
error: Content is protected !!