ಮಂಗಳೂರು ಚಲೋ : ರಾಜ್ಯದ ವಿವಿಧೆಡೆ ಬಿಜೆಪಿ ನಾಯಕರು, ಕಾರ್ಯಕರ್ತರ ಬಂಧನ |News Mirchi

ಮಂಗಳೂರು ಚಲೋ : ರಾಜ್ಯದ ವಿವಿಧೆಡೆ ಬಿಜೆಪಿ ನಾಯಕರು, ಕಾರ್ಯಕರ್ತರ ಬಂಧನ

ಬೆಂಗಳೂರು: ಇಂದು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ “ಮಂಗಳೂರು ಚಲೋ” ಬೈಕ್ ರ್ಯಾಲಿಗೆ ಅನುಮತಿ ನಿರಕಾರಿಸಿ ನಿಷೇಧಾಜ್ಞೆ ಹೊರಡಿಸಿದ್ದ ಪೊಲೀಸರು, ರ್ಯಾಲಿಗೆ ಮುಂದಾದ ಹಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ನಗರದ ಫ್ರೀಡಂ ಪಾರ್ಕ್ ನಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ನಾಯಕರಾದ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ, ಶಾಸಕ ವೈ.ಎ.ನಾರಾಯಣ ಸ್ವಾಮಿ ಮುಂತಾದ ನಾಯಕರು ಸೇರಿದಂತೆ ಸುಮಾರು 400 ಜನರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈಗಾಗಲೇ 200 ಬೈಕ್ ಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಾಂಧರ್ಭಿಕ ಚಿತ್ರ

ಚಿಕ್ಕಬಳ್ಳಾಪುರದಲ್ಲೂ ಬೈಕ್ ರ್ಯಾಲಿಗೆ ಮುಂದಾಗಿದ್ದ ಸುಮಾರು 60 ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದು, ರಾಮನಗರದಲ್ಲಿ 20 ನಾಯಕರನ್ನು ಬಂಧಿಸಿದ್ದಾರೆ. ಕೆಜೆಎಫ್, ಕೋಲಾರ, ಮುಳಬಾಗಿಲು, ಕಲಬುರಗಿಗಳಲ್ಲಿ ಬೈಕ್ ರ್ಯಾಲಿಯನ್ನು ತಡೆದ ಪೊಲೀಸರು ಬಿಜೆಪಿ ಮುಖಂಡರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಹತ್ಯೆಯಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತರ ರುದ್ರೇಶ್ ಪತ್ನಿ ಮೈಸೂರಿನಲ್ಲಿ ರ್ಯಾಲಿಗೆ ಚಾಲನೆ ನೀಡಿದರು. ಆದರೆ ರ್ಯಾಲಿಯನ್ನು ತಡೆದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಮಂಗಳೂರು ಚಲೋ ರ್ಯಾಲಿಗೆ ಅನುಮತಿ ನಿರಾಕರಿಸಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಲ್ನಡಿಗೆ ಜಾಥಾ ಮಾಡಿದರೆ ನಮ್ಮ ವಿರೋಧವಿಲ್ಲ, ಬೈಕ್ ರ್ಯಾಲಿ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದ್ದು, ಮಂಗಳೂರು ಚಲೋ ಬದಲು ರೈತರ ಸಾಲ ಮನ್ನಾ ಮಾಡಲು ದೆಹಲಿ ಚಲೋ ರ್ಯಾಲಿ ನಡೆಸಲಿ, ಅದಕ್ಕೆ ನಾವೂ ಬೆಂಬಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Loading...
loading...
error: Content is protected !!