ಊರ್ಜಿತ್ ಪಟೇಲ್ ನೆರವಿಗೆ ಬಂದ ಮನಮೋಹನ್ ಸಿಂಗ್!

ಗರಿಷ್ಠ ಮುಖ ಬೆಲೆಯ ನೋಟು ರದ್ದು ಕ್ರಮವನ್ನು ವ್ಯವಸ್ಥಿತ ದರೋಡೆ ಎಂದು ಬಣ್ಣಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಇದೇ ವಿಷಯದ ಕುರಿತಾಗಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಸಂಸತ್ತಿನ ಸ್ಟ್ಯಾಂಡಿಂಗ್ ಕಮಿಟಿ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದಾಗ ನೆರವಿಗೆ ಬಂದಿದ್ದಾರೆ ಎನ್ನಲಾಗಿದೆ.

ಹಣ ವಿತ್ ಡ್ರಾ ಮಾಡಲು ಈಗಿರುವ ಮಿತಿಗಳನ್ನು ರದ್ದುಗೊಳಿಸಿದರೆ ಸಮಸ್ಯೆ ಪರಿಹಾರವಾಗುತ್ತದೆಯೇ? 50 ದಿನಗಳಲ್ಲಿ ಎಷ್ಟು ಹಳೆಯ ರದ್ದಾದ ನೋಟುಗಳು ವಾಪಸ್ ಬಂದಿವೆ? ಮುಂತಾದ ಪ್ರಶ್ನೆಗಳನ್ನು ಊರ್ಜಿತ್ ಪಟೇಲ್ ಗೆ ವೀರಪ್ಪ ಮೊಯಿಲಿ ನೇತೃತ್ವದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಕಾಂಗ್ರೆಸ್ ಸಂಸದರೊಬ್ಬರು ಕೇಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿತ್ತು.

ಆದರೆ ಸ್ಟ್ಯಾಂಡಿಂಗ್ ಕಮಿಟಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಮಿತಿಯಲ್ಲಿ ಒಬ್ಬರಾದ ಮನಮೋಹನ್ ಸಿಂಗ್, ಈ ಪ್ರಶ್ನೆಗಳಿಗೆ ಉತ್ತರಿಸಬೇಡಿ ಎಂದು ಊರ್ಜಿತ್ ಪಟೇಲ್ ರವರಿಗೆ ಸಲಹೆ ನೀಡಿದರಂತೆ. ಆ ಪ್ರಶ್ನೆಗಳಿಗೆ ಉತ್ತರಿಸಿದರೆ ಸೆಂಟ್ರಲ್ ಬ್ಯಾಂಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಮನಮೋಹನ್ ಸಿಂಗ್ ಎಚ್ಚರಿಸಿದರಂತೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಆರ್‌ಬಿಐ ಗವರ್ನರ್ ಜನವರಿ 20 ರಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಹಾಜರಾಗಬೇಕಿದೆ.