ಜಪಾನಿನಲ್ಲಿ ಭೂಕಂಪ

ಟೋಕಿಯೋ: ಉತ್ತರ ಜಪಾನಿನಲ್ಲಿ ಮಂಗಳವಾರ ಮುಂಜಾನೆ 6.9 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ. ಇದನ್ನು ಅಮೆರಿಕದ ಭೂಗರ್ಭ ಸರ್ವೇ ಸಂಸ್ಥೆ ದೃಢಪಡಿಸಿದೆ. ಭೂಕಂಪನದ ಪರಿಣಾಮ, ಕೆಲವೇ ನಿಮಿಷಗಳ ಅಂತರದಲ್ಲಿ ಸಮುದ್ರದ ಅಲೆಗಳು ಸುಮಾರು 3 ಮೀಟರ್ ಎತ್ತರಕ್ಕೇರಿ ಅಪ್ಪಳಿಸುತ್ತಿದ್ದು, ಪ್ರಸಿದ್ಧ ಫುಕುಶಿಮಾ ಪರಮಾಣು ವಿದ್ಯುತ್ ಕೇಂದ್ರಕ್ಕೆ ಹಾನಿಯಾಗಿದೆ.

ಫುಕುಶಿಮಾ ನಗರಕ್ಕೆ 37 ಕಿಮೀ ದೂರದಲ್ಲಿ 11.4 ಕಿಮೀ ಆಳದಲ್ಲಿ (ಫೆಸಿಫಿಕ್ ಸಾಗರದಲ್ಲಿ) ಭೂಕಂಪದ ಕೇಂದ್ರ ಬಿಂದುವನ್ನು ಗುರುತಿಸಿದ್ದಾರೆ. ಭೂಕಂಪದಿಂದ ಹಾನಿಗೊಳಗಾಗಿರುವ ಪರಮಾಣು ವಿದ್ಯುತ್ ಕೇಂದ್ರ 2011 ರಲ್ಲಿಯೂ ತೀವ್ರ ಹಾನಿಗೊಳಗಾಗಿತ್ತು. ಅಂದು ಸಂಭವಿಸಿದ ಭೂಕಂಪಕ್ಕೆ 20 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಇದೀಗ ಸಂಭವಿಸಿದ ಭೂಕಂಪದಿಂದಾದ ಸಾವು ನೋವುಗಳ ಬಗ್ಗೆ ಇನ್ನೂ ವರದಿಯಾಗಿಲ್ಲ.