ಕೊಹ್ಲಿ ಸಮಯೋಚಿತ ಆಟ, ಪಂದ್ಯ ಡ್ರಾನಲ್ಲಿ ಅಂತ್ಯ

ರಾಜ್‌ಕೋಟ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೋರಾಟ ಡ್ರಾದೊಂದಿಗೆ ಅಂತ್ಯಗೊಂಡಿದೆ. ಭಾನುವಾರ ಇಂಗ್ಲೆಂಡ್ ನೀಡಿದ್ದ 310 ರನ್ ಗಳ ಗುರಿಯನ್ನು ಬೆನ್ನತ್ತುವಲ್ಲಿ ಭಾರತೀಯ ಆಟಗಾರರು ಒದ್ದಾಡಿದರೂ, ನಾಯಕ ವಿರಾಟ್ ಕೊಹ್ಲಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ದೊಡ್ಡ ಮೊತ್ತದ ಗುರಿಯನ್ನು ಹೊತ್ತ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲೇ ಗೌತಮ್ ಗಂಭೀರ್(0) ವಿಕೆಟ್ ಕಳೆದುಕೊಂಡಿತು. ಅ ಸಮಯದಲ್ಲಿ ಮುರಳಿ ವಿಜಯ್ ಇನ್ನಿಂಗ್ಸ್ ಮುನ್ನಡೆಸುವ ಯತ್ನ ನಡೆಸಿದರು. ಆದರೆ ತಂಡದ ಮೊತ್ತ 47 ಆಗಿದ್ದಾಗ ಪೂಜಾರ(18) ಔಟ್ ಆದರು. ನಂತರ ಸ್ವಲ್ಪ ಸಮಯದಲ್ಲೇ ವಿಜಯ್(31), ಅಜಿಂಕ್ಯ ರೆಹಾನೆ(1) ನಿರ್ಗಮಿಸಿದರು.

ಹೀಗಾಗಿ 71 ರನ್ ಗಳಿಗೇ ನಾಲ್ಕು ವಿಕೆಟ್ ಕಳೆದುಕೊಂಡಿತು ಭಾರತ. ಆದರೆ ವಿರಾಟ್ ಕೊಹ್ಲಿ -ರವಿ ಚಂದ್ರನ್ ಅಶ್ವಿನ್ ರ ಜೋಡಿ 47 ರನ್ ಗಳ ಪಾರ್ಟ್ನರ್ಷಿಪ್ ನೊಂದಿಗೆ ಭಾರತ ತಂಡ ಚೇತರಿಸಿಕೊಂಡಿತು. ಅಶ್ವಿನ್(32), ಸಾಹಾ(9) 14 ರನ್ ಗಳ ಅಂತರದಲ್ಲಿ ಪೆವಿಲಿಯನ್ ದಾರಿ ಹಿಡಿದರು. ಹೀಗಾಗಿ ಮತ್ತೊಮ್ಮೆ ಭಾರತ ಕಷ್ಟದಲ್ಲಿ ಸಿಲುಕಿತು. ಮತ್ತೊಂದು ಕಡೆ ಕೊಹ್ಲಿ(49 ಅಜೇಯ; 98 ಎಸೆತಗಳಲ್ಲಿ 6 ಬೌಂಡರಿ) ಸಂಯಮದ ಆಟ ಪ್ರದರ್ಶಿಸಿದರು. ಜೊತೆಗೆ ರವೀಂದ್ರ ಜಡೇಜಾ(32 ನಾಟೌಟ್) ಉತ್ತಮ ಸಾಥ್ ನೀಡಿದರು. ಆಟ ಮುಗಿಯುವ ಹೊತ್ತಿಗೆ ಭಾರತ ಆರು ವಿಕೆಟ್ ಕಳೆದುಕೊಂಡು ,172 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಂಡಿತು.

ಇಂದಿನ ಆಟದಲ್ಲಿ ಇಂಗ್ಲೆಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 260/3 ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಹೀಗಾಗಿ ಇಂಗ್ಕೆಮಡ್ ಗೆ 309 ರನ್‌ಗಳ ಮುನ್ನಡೆ ಲಭಿಸಿತ್ತು.