ಪ್ರತಿಪಕ್ಷಗಳಿಂದ ಮೀರಾ ಕುಮಾರ್ ರಾಷ್ಟ್ರಪತಿ ಅಭ್ಯರ್ಥಿ

ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿ ರಾಮನಾಥ್ ಕೋವಿಂದ್ ವಿರುದ್ಧ ತಮ್ಮ ಅಭ್ಯರ್ಥಿ ಯಾರಾಗಬೇಕು ಎಂದು ನಿರ್ಧರಿಸಲು ಇಂದು ಸಭೆ ಸೇರಿದ್ದ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು, ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಆಯ್ಕೆ ಮಾಡಿವೆ. ಇದಕ್ಕೂ ಮುನ್ನ ಗೋಪಾಲಕೃಷ್ಣ ಗಾಂಧಿ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ಹೆಸರುಗಳೂ ಚಾಲ್ತಿಯಲ್ಲಿದ್ದವು.

ಕೆಲ ದಿನಗಳ ಹಿಂದಷ್ಟೇ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟದಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಅಭ್ಯರ್ಥಿಗೆ ಶಿವಸೇನೆ, ಮತ್ತು ಆರಂಭದಲ್ಲಿ ಪ್ರತಿಪಕ್ಷಗಳ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ನಿತೀಶ್ ನೇತೃತ್ವದ ಜೆಡಿಯು ಬೆಂಬಲ ವ್ಯಕ್ತಪಡಿಸಿವೆ.

ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಪ್ರಸ್ತುತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಧಿಕಾರಾವಧಿ ಜುಲೈ 24 ಕ್ಕೆ ಮುಗಿಯಲಿದೆ.