ಖಿನ್ನತೆಯಿಂದ ಬಳಲುತ್ತಿದ್ದ ಕಾಣೆಯಾಗಿರುವ ಜೆಎನ್‌ಯು ವಿದ್ಯಾರ್ಥಿ

ಕಾಣೆಯಾಗಿರುವ ದೆಹಲಿ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹಮದ್ ಖಿನ್ನತೆಯಿಂದ ಬಳಲುತ್ತಿದ್ದ ಮತ್ತು ಅದಕ್ಕಾಗಿ ಔಷಧಿಗಳನ್ನೂ ಸೇವಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ವೈದ್ಯರು ಸೂಚಿಸಿದ್ದ ಔಷಧಿ ಚೀಟಿಗಳು ತನಿಖಾಧಿಕಾರಿಗಳಿಗೆ ದೊರೆತಿದ್ದು, ಕಾಣೆಯಾಗುವ ಮುನ್ನ ಎರಡು ವಾರಗಳಲ್ಲಿ ಚಿಕಿತ್ಸೆಗಾಗಿ ಮೂರು ಬಾರಿ ವೈದ್ಯರ ಬಳಿ ಹೋಗಿದ್ದ ಎನ್ನಲಾಗಿದೆ. ಹಾಸ್ಟೆಲ್ ತೊರೆಯುವ ಬಗ್ಗೆ ವೈದ್ಯರ ಬಳಿಯೂ ನಜೀಬ್ ಆಗಾಗ ಹೇಳುತ್ತಿದ್ದನಂತೆ.

ನಾಪತ್ತೆಯಾಗುವ ಮುನ್ನ ಆತ ತನ್ನ ತಾಯಿಗೆ ಕರೆ ಮಾಡಿ ತಾನು ಹಾಸ್ಟೆಲ್ ಬಿಡುತ್ತೇನೆ ಎಂದು ಹೇಳಿದ್ದ. ಆದರೆ ಆತನ ಆರೋಗ್ಯ ಸ್ಥಿತಿಯನ್ನು ಅರಿತಿದ್ದ ಅತನ ತಾಯಿ ತಾನು ಬರುವವರೆಗೂ ಅಲ್ಲಿಯೇ ಇರು ಎಂದು ಹೇಳಿದ್ದರು. ನಂತರ ನಜೀಬ್ ಸ್ನೇಹಿತನಿಗೂ ಕರೆ ಮಾಡಿದ್ದ ನಜೀಬ್ ತಾಯಿ, ತಾನು ಬರುವವರೆಗೂ ನಜೀಬ್ ನನ್ನು ಒಂಟಿಯಾಗಿ ಬಿಡಬೇಡ ಎಂದು ಹೇಳಿದ್ದರಂತೆ. ಆದರೆ ತಾಯಿ ಅಲ್ಲಿಗೆ ತಲುಪುವ ವೇಳೆಗೆ ಮಗ ಅದಾಗಲೇ ಹಾಸ್ಟೆಲ್ ತೊರೆದಿದ್ದ ಪೊಲೀಸರು ಹೇಳಿದ್ದಾರೆ.

ಆದರೆ ಇದೆಲ್ಲವನ್ನೂ ಅಲ್ಲಗೆಳೆದಿರುವ ನಜೀಬ್ ತಾಯಿ, ಪೊಲೀಸರು ನನ್ನ ಮಗನನ್ನು ಹುಡುಕಿಕೊಡಲು ವಿಫಲರಾಗಿದ್ದರಿಂದ ಹೀಗೆ ಹೇಳುತ್ತಿದ್ದಾರೆಂದು ಅರೋಪಿಸಿದ್ದಾರೆ.