ಕೇಂದ್ರ ಸಚಿವ ಸಂಪುಟಕ್ಕೆ ಹೊಸ ಮುಖಗಳು, ಪ್ರಹ್ಲಾದ್ ಜೋಷಿಗೆ ಅವಕಾಶ ಸಾಧ್ಯತೆ

ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಭಾನುವಾರ ಬೆಳಗ್ಗೆ ಮುಹೂರ್ತ ನಿಗದಿಯಾಗಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಕ್ಷಣ ಕ್ಷಣಕ್ಕೂ ಟೆನ್ಷನ್ ಹೆಚ್ಚಾಗುತ್ತಿದೆ. 2019 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ, ಕರ್ನಾಟಕ, ಗುಜರಾತ್, ಹಿಮಾಚಲ ಪ್ರದೇಶ, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಿಗೆ ನಡೆಯುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ಸಚಿವ ಸಂಪುಟ ವಿಸ್ತರಣೆ ಇದಾಗಿರುವುದರಿಂದ, ಈಗ ಸಚಿವ ಸ್ಥಾನದಿಂದ ವಂಚಿತವಾದರೆ ಮುಂದಿನ ಅವಧಿಯವರೆಗೂ ಅವಕಾಶವಿಲ್ಲದಿರುವುದು ಆಕಾಂಕ್ಷಿಗಳ ಚಿಂತೆಗೆ ಕಾರಣವಾಗಿದೆ.

ಸಚಿವ ಸಂಪುಟ ವಿಸ್ತರಣೆಗಾಗಿ ಈಗಾಗಲೇ ಹೈಕಮಾಂಡ್ ಆದೇಶಗಳ ಹಿನ್ನೆಲೆಯಲ್ಲಿ ಸುಮಾರು 10 ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕರ್ನಾಟಕದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿಯವರಿಗೆ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ಹಿಮಾಚಲ ಪ್ರದೇಶದಿಂದ ಅನುರಾಗ್ ಠಾಕೂರ್ ಅಥವಾ ಮಾಜಿ ಮುಖ್ಯಮಂತ್ರಿ ಪಿ.ಕೆ.ಧುಮಾಲ್ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಒಲಿಯಲಿದೆ. ಉಮಾಭಾರತಿ ಸ್ಥಾನಕ್ಕೆ ಮಧ್ಯಪ್ರದೇಶದ ಹಿಂದುಳಿದ ವರ್ಗದ ನಾಯಕ ಪ್ರಹ್ಲಾದ್ ಪಟೇಲ್ ಬರುವ ಸಾಧ್ಯತೆ ಇದೆ. ರಾಜಸ್ಥಾನದಿಂದ ಒ.ಪಿ.ಮಾಥೂರ್ ಗೆ ಸಂಪುಟ ದರ್ಜೆ ಸ್ಥಾನ ಸಿಗಬಹುದು. ಆದರೆ ಮಾಥುರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳದಂತೆ ಮುಖ್ಯಮಂತ್ರಿ ವಸುಂಧರಾ ರಾಜೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಕ್ಯಾಬಿನೆಟ್ ವಿಸ್ತರಣೆಯಲ್ಲಿ ವ್ಯಕ್ತಿಗಳ ಸಾಮರ್ಥ್ಯದೊಂದಿಗೆ ಪ್ರಾದೇಶಿಕ ಸಮತೋಲನಕ್ಕೆ ಮಹತ್ವ ನೀಡಬೇಕಿದೆ. ಈ ಎರಡೂ ಅಂಶಗಳ ಜೊತೆ ಹೊಸದಾಗಿ ಎನ್.ಡಿ.ಎ ಮೈತ್ರಿಕೂಟವನ್ನು ಸೇರಿರುವ ಮಿತ್ರ ಪಕ್ಷಗಳಿಗೆ ಸ್ಥಾನ ನೀಡಬೇಕಿದೆ. ನಿತೀಶ್ ಕುಮಾರ್ ಅವರ ಜೆಡಿಯು ಎನ್.ಡಿ.ಎ ಸೇರಿದ್ದರಿಂದ ಆ ಪಕ್ಷದಿಂದ ಒಬ್ಬರಿಗೆ, ಅಣ್ಣಾಡಿಎಂಕೆ ಯಿಂದ ವಿ.ಮೈತ್ರೇಯನ್ ಮತ್ತು ತಂಬಿದೊರೈ ರವರಿಗೆ ಸ್ಥಾನ ಲಭಿಸಬಹುದು. ಇನ್ನು ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಹೋಗಿದ್ದು, ಸತತ ರೈಲು ಅಪಘಾತಗಳಿಗೆ ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವರಾಗಿ ರಾಜೀನಾಮೆ ನೀಡುವುದಾಗಿ ಸುರೇಶ್ ಪ್ರಭು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರಿಬ್ಬರ ಸ್ಥಾಗಳನ್ನೂ ಮೋದಿ ಸರ್ಕಾರ ಭರ್ತಿ ಮಾಡಬೇಕಿದೆ.

ಮನೋಹರ್ ಪರಿಕ್ಕರ್ ನಿರ್ವಹಿಸಿದ್ದ ರಕ್ಷಣಾ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಹೊತ್ತುಕೊಂಡಿದ್ದಾರೆ. ಇಂತಹ ಮಹತ್ವದ ಖಾತೆಯನ್ನು ಯಾರಿಗೆ ನೀಡುತ್ತಾರೆ ಎಂಬ ವಿಷಯದ ಕುರಿತು ಕುತೂಹಲ ಮೂಡಿದೆ. ಇನ್ನು ಸುರೇಶ್ ಪ್ರಭು ಅವರ ಸ್ಥಾನದಲ್ಲಿ ಈಗಾಗಲೇ ಸಂಪುಟದಿಂದ ಹೊರಬಂದ ನಿತಿನ್ ಗಡ್ಕರಿಯವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.