ಮೋದಿಗೆ ಅದ್ಧೂರಿ ಸ್ವಾಗತ, ವಿಮಾನ ನಿಲ್ದಾಣಕ್ಕೆ ಆಗಮಿಸಿದ ನೆತನ್ಯಾಹು ಸಚಿವ ಸಂಪುಟ

ಸುಮಾರು 70 ವರ್ಷಗಳ ನಂತರ ಇಸ್ರೇಲ್ ಪ್ರವಾಸ ಕೈಗೊಂಡಿರುವ ಮೊದಲ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಸ್ರೇಲ್ ನಲ್ಲಿ ಅದ್ಭುತ ಸ್ವಾಗತ ಲಭಿಸಿದೆ. 3 ದಿನಗಳ ಪ್ರವಾಸದ ಅಂಗವಾಗಿ ಇಸ್ರೇಲ್ ತಲುಪಿದ ಮೋದಿಯವರನ್ನು ಆದರದಿಂದ ಸ್ವಾಗತಿಸಲು ಟೆಲ್ ಅವಿವ್ ನಲ್ಲಿನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಆ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಅವರ ಇಡೀ ಸಚಿವ ಸಂಪುಟವೇ ಆಗಮಿಸಿತ್ತು.

ಮೋದಿ ವಿಮಾನವಿಳಿಯುತ್ತಿದ್ದಂತೆಯೇ ಎರಡೂ ದೇಶಗಳ ಪ್ರಧಾನಿಗಳೂ ಒಬ್ಬರನ್ನೊಬ್ಬರು ಮೂರು ಬಾರಿ ಅಪ್ಪಿಕೊಂಡರು. ಇಸ್ರೇಲ್ ಸೇನಾ ತಂಡ ಉಭಯದೇಶಗಳ ರಾಷ್ಟ್ರಗೀತೆಗಳನ್ನು ಹಾಡಿ ವಂದನಾರ್ಪಣೆ ಮಾಡಿತು. “ಆಪ್ ಕಾ ಸ್ವಾಗತ್ ಹೈ, ಮೇರೇ ದೋಸ್ತ್” ಎಂದು ಹಿಂದಿಯಲ್ಲಿ ನೆತನ್ಯಾಹು ಮೋದಿಯವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಮೆರಿಕಾ ಅಧ್ಯಕ್ಷ, ಪೋಪ್ ಗೆ ಮಾತ್ರ ನೀಡುವ ಈ ಅಪರೂಪದ ಗೌರವವನ್ನು ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ಭಾರತದ ಪ್ರಧಾನಿಗೆ ನೀಡಿತು.

ನಂತರ ಮೋದಿ, ನೆತನ್ಯಾಹು ವಿಮಾನ ನಿಲ್ದಾಣದಲ್ಲಿ ಸಂಕ್ಷಿಪ್ತವಾಗಿ ಭಾಷಣ ಮಾಡಿದರು. ಇದು ನಿಜವಾಗಿಯೂ ಐತಿಹಾಸಿಕ ಪ್ರವಾಸ, ಕಳೆದ 70 ವರ್ಷಗಳಲ್ಲಿ ಭಾರತದ ಪ್ರಧಾನಿಗಾಗಿ ಎದುರು ನೋಡುತ್ತಿದ್ದೇವೆ. ಭಾರತದ ಹೆಮ್ಮೆಯ ನಾಯಕ, ವಿಶ್ವದಲ್ಲಿ ಪ್ರಮುಖ ನಾಯಕ ಮೋದಿ ಎಂದು ನೆತನ್ಯಾಹು ಭಾವೋದ್ವೇಗದಿಂದ ಭಾಷಣ ಆರಂಭಿಸಿದರು. ಹಲವು ಬಾರಿ ಮೋದಿಯವರನ್ನು ನನ್ನ ಸ್ನೇಹಿತ ಎಂದು ಕರೆದರು.

“ಭಾರತವನ್ನು ಪ್ರೀತಿಸುತ್ತಿದ್ದೇವೆ, ಆ ದೇಶದೊಂದಿಗೆ ಸಹಕಾರದಲ್ಲಿ ಇನ್ನು ಆಕಾಶವೇ ವೆಂಬ ಗಡಿಯನ್ನು ಕೂಡಾ ಅಳಿಸುತ್ತಿದ್ದೇವೆ. ಭಾರತ, ಇಸ್ರೇಲ್ ಸಂಬಂಧಗಳಲ್ಲಿ ಆಕಾಶವೇ ಗಡಿ ಎಂದು ನಮ್ಮ ಮೊದಲ ಸಮಾವೇಶದಲ್ಲಿ ಮೋದಿಯವರು ಹೇಳಿದ್ದ ವಿಷಯ ನೆನಪಿದೆ. ಈಗ ನಾವು ಬಾಹ್ಯಾಕಾಶದಲ್ಲಿಯೂ ಕೂಡಾ ಪರಸ್ಪರ ಸಹಕರಿಸುತ್ತಿದ್ದೇವೆ. ಹೀಗಾಗಿ ಆಕಾಶವೂ ಇನ್ನು ನಮ್ಮ ಸಂಬಂಧಗಳಿಗೆ ಅಡ್ಡಿಯಲ್ಲ” ಎಂದು ನೆತನ್ಯಾಹು ಹೇಳಿದರು.

ಅದ್ಧೂರಿ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಮೋದಿ, ಹಿಬ್ರೂವಿನ್ಲಲಿ ಭಾಷಣ ಆರಂಭಿಸಿದರು. ಶಾಲೋಮ್…(ಹೆಲೋ) ಇಲ್ಲಿಗೆ ಬಂದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ನನ್ನ ಸ್ನೇಹಿತ ನೆತನ್ಯಾಹು ಅವರಿಗೆ ಕೃತಜ್ಞತೆಗಳು. ನನ್ನ ಪ್ರವಾಸ ಭವಿಷ್ಯತ್ತಿನಲ್ಲಿ ಮಾರ್ಗದರ್ಶನವಾಗಿ ನಿಲ್ಲುತ್ತದೆ. ಇಸ್ರೇಲ್ ಪ್ರವಾಸ ಮಾಡುತ್ತಿರುವ ಮೊದಲ ಭಾರತದ ಪ್ರಧಾನಿ ನಾನಾಗಿರುವುದು ಗೌರವ ಎಂದು ಭಾವಿಸುತ್ತೇನೆ. ಇಸ್ರೇಲ್ ಜೊತೆ ದೃಢವಾದ ಸಂಬಂಧ ಹೊಂದುವುದೇ ನನ್ನ ಪ್ರವಾಸದ ಮುಖ್ಯ ಉದ್ದೇಶ. ಉಭಯ ದೇಶಗಳಿಗೆ ಕಂಟಕವಾಗಿರುವ ಭಯೋತ್ಪಾದನೆಯಿಂದ ರಕ್ಷಿಸಿಕೊಳ್ಳಬೇಕು. ಜೊತೆಯಾಗಿ ಕೆಲಸ ಮಾಡಿದರೆ ಮತ್ತಷ್ಟು ಮುಂದೆ ಸಾಗುವುದರೊಂದಿಗೆ ಅದ್ಭುತಗಳನ್ನು ಸಾಧಿಸುತ್ತೇವೆ. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಯುವಶಕ್ತಿ ಇದೆ. ಎರಡೂ ದೇಶಗಳಲ್ಲಿ ಬುದ್ದಿವಂತ ಯುವಜನತೆ ಇದ್ದಾರೆ. ಅವರೇ ನಮ್ಮ ಶಕ್ತಿ ಎಂದು ಮೋದಿ ಬಣ್ಣಿಸಿದರು.