ಈ ಯಂತ್ರವೊಂದಿದ್ದರೆ, ಯಾವ ನೀರನ್ನಾದರೂ ಕುಡಿದುಬಿಡಬಹುದು – News Mirchi

ಈ ಯಂತ್ರವೊಂದಿದ್ದರೆ, ಯಾವ ನೀರನ್ನಾದರೂ ಕುಡಿದುಬಿಡಬಹುದು

ಹೈಫಾ (ಇಸ್ರೇಲ್): ಸಮುದ್ರದ ಉಪ್ಪು ನೀರು, ನದಿ, ಕೆರೆ ಕುಂಟೆಗಳಲ್ಲಿನ ಕೆಸರು ನೀರು ಹೀಗೆ ಯಾವುದೇ ರೀತಿಯ ನೀರನ್ನಾದರೂ ಈ ಯಂತ್ರದಲ್ಲಿ ಸುರಿದರೆ ಸಾಕು, ಶುದ್ಧ ಕುಡಿಯುವ ನೀರು ಹೊರಗೆ ಬಂದು ಬಿಡುತ್ತೆ. ಇಸ್ರೇಲ್ ಪ್ರವಾಸದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಇದರ ಕಾರ್ಯವೈಖರಿಯನ್ನು ಕುತೂಹಲದಿಂದ ಪರಿಶೀಲಿಸಿದರು. ಪ್ರವಾಸದ ಅಂತಿಮ ದಿನದಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿ ಓಲ್ಗಾ ಬೀಚ್ ನಲ್ಲಿ ಇರುವ ಅಪಲವಣೀಕರಣ ವಿಭಾಗಕ್ಕೆ ಭೇಟಿ ನೀಡಿದ್ದರು. ತುಂಬಾ ಹೊತ್ತು ಆ ಯಂತ್ರ, ಮತ್ತದರ ಕಾರ್ಯವೈಖರಿ ಕುರಿತು ಚರ್ಚಿಸಿದರು.

ಈ ಯಂತ್ರವನ್ನು ಎಲ್ಲಿಗೆ ಬೇಕೆಂದರೂ ತೆಗೆದುಕೊಂಡು ಹೋಗಬಹುದು ಎಂದು ಯಂತ್ರ ನಿರ್ವಹಣೆ ಮಾಡುವವರು ವಿವರಿಸಿದರು. ಪ್ರವಾಹ, ಭೂಕಂಪಗಳು ಎದುರಾದಾಗ, ಸೈನಿಕರ ಅಗತ್ಯಗಳನ್ನು ಪೂರೈಸಲು, ಗ್ರಾಮೀಣ ಪ್ರದೇಶಗಳಿಗೆ ಇದು ತುಂಬಾ ಉಪಯುಕ್ತವಾಗುತ್ತದೆ ಎಂದು ಹೇಳಿದರು. ದಿನಕ್ಕೆ 20 ಸಾವಿರ ಲೀಟರ್ ಗಳ ಸಮುದ್ರದ ನೀರನ್ನು, 80 ಸಾವಿರ ಲೀಟರ್ ಕೆಸರು ನೀರನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ.ಹೆಚ್.ಒ) ಗುಣಮಟ್ಟಗಳೊಂದಿಗೆ ಶುದ್ಧೀಕರಿಸುತ್ತದೆ ಎಂದು ವಿವರಿಸಿದರು. ಈ ಯಂತ್ರದಿಂದ ಶುದ್ಧೀಕರಿಸಿದ ನೀರನ್ನು ಮೋದಿ, ನೆತನ್ಯಾಹು ರುಚಿ ನೋಡಿದರು.

ಮೋದಿಯವರನ್ನು ಕೂರಿಸಿಕೊಂಡು ಇಸ್ರೇಲ್ ಪ್ರಧಾನಿ ಆ ವಾಹನವನ್ನು ಚಾಲನೆ ಮಾಡಿದರು. ಅಲವಣೀಕರಣ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಿದ್ಧ ಎಂದು ನೆತನ್ಯಾಹು ಹೇಳಿದ್ದಾರೆ. ಹವಾಮಾನ ವೈಪರೀತ್ಯ ಎದುರಾದಾಗ ಶುದ್ಧ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಇಂತಹ ವಾಹನ ಉಪಯೋಗವಾಗುತ್ತದೆ ಎಂದು ಮೋದಿ ಹೇಳಿದರು.

Loading...