ಮೋದಿ ಭಾಷಣ ಮತ್ತು ಟೆಲಿಪ್ರಾಂಪ್ಟರ್

ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ತಮ್ಮ ಕೈಯಲ್ಲಿ ಭಾಷಣದ ಕಾಗದವಿದ್ದರೂ ಅದನ್ನು ನೋಡುವುದಿಲ್ಲ. ಅವರು ಅತ್ಯುತ್ತಮ ವಾಗ್ಮಿಯಾಗಿದ್ದು, ಮಾತನಾಡುವ ವಿಷಯದ ಬಗ್ಗೆ ಸ್ಪಷ್ಟ ಅರಿವಿರುತ್ತದೆ.

ಕೆಲವು ಪ್ರಮುಖ ಸಭೆಗಳಲ್ಲಿ ಅದರಲ್ಲೂ ವಿದೇಶಗಳಲ್ಲೊ ಇಂಗ್ಲೀಷ್ ನಲ್ಲಿ ಮಾತನಾಡುವಾಗ ಮಾತ್ರ ಟೆಲಿಪ್ರಾಂಪ್ಟರ್ ಬಳಸುತ್ತಾರೆ. ಇಂಗ್ಲೀಷ್ ನಿರರ್ಗಳವಾಗಿ ಮಾತನಾಡುವ ವಿಶ್ವದ ಪ್ರಮುಖ ನಾಯಕರೂ ಟೆಲಿಪ್ರಾಂಪ್ಟರ್ ಬಳಕೆ ಮಾಡುತ್ತಾರೆ ಎಂಬುದು ಗಮನಿಸಬೇಕಾದ ಅಂಶ.

ಕಾರ್ಯಕ್ರಮದಲ್ಲಿ ಮಾತನಾಡುವಾಗ ಜನರ ಗಮನಕ್ಕೆ ಬರದಂತೆ ಭಾಷಣ ಮಾಡುವವರಿಗೆ ಟೆಲಿಪ್ರಾಂಪ್ಟರ್ ಬಹಳ ಉಪಯೋಗಕ್ಕೆ ಬರುತ್ತದೆ. ಟೆಲಿಪ್ರಾಂಪ್ಟರ್ ನಲ್ಲಿ ಕಾಣುವ ಅಕ್ಷರಗಳು ಭಾಷಣ ಮಾಡುವವರಿಗೆ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಲಾಗಿರುತ್ತದೆ. ನೋಡುವವರಿಗೆ ಅದು ಪಾರದರ್ಶಕವಾಗಿ ಕಾಣುವುದರಿಂದ ಅದರಲ್ಲಿ ಮೂಡುವ ಅಕ್ಷರಗಳು ಅವರಿಗೆ ಕಾಣುವುದಿಲ್ಲ. ಭಾಷಣಕಾರನಿಗೆ ಅನುಕೂಲವಾಗುವಂತೆ ಟೆಲಿಪ್ರಾಂಪ್ಟರ್ ನಲ್ಲಿ ಚಲಿಸುವ ಅಕ್ಷರಗಳ ವೇಗವನ್ನು ಆಪರೇಟರ್ ನಿಯಂತ್ರಿಸುತ್ತಾನೆ. ಭಾಷಣಕಾರ ಮಾತಿನ ನಡುವೆ ಒಂದು ಟೆಲಿಪ್ರಾಂಪ್ಟರ್ ನಿಂದ ಮತ್ತೊಂದು ಟೆಲಿಪ್ರಾಂಪ್ಟರ್ ನತ್ತ ಕಣ್ಣು ಹಾಯಿಸುತ್ತಿರುತ್ತಾರೆ. ಇದು ಜನರಿಗೆ ಭಾಷಣಕಾರ ತಮ್ಮನ್ನು ನೋಡಿದಂತೆ ಅನುಭವವಾಗುತ್ತದೆ.