ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪು ಹಣ, 88ನೇ ಸ್ಥಾನಕ್ಕೆ ಕುಸಿದ ಭಾರತ

ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಕಪ್ಪು ಹಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ಬ್ಯಾಂಕುಗಳಲ್ಲಿ ಭಾರತೀಯರು ಅಧಿಕೃತವಾಗಿ ಜಮೆ ಮಾಡಿದ ಹಣ ವಿದೇಶಿ ಖಾತೆದಾರರು ಇಟ್ಟಿರುವ ಹಣಕ್ಕೆ ಹೋಲಿಸಿದರೆ ಶೇ 0.04 ಕ್ಕೆ ಬಿದ್ದಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್(ಎಸ್.ಎನ್.ಬಿ) ಬಿಡುಗಡೆ ಮಾಡಿದ ವರದಿ ಈ ವಿವರಗಳನ್ನು ಬಹಿರಂಗಪಡಿಸಿದೆ.

ಸ್ವಿಸ್ ಬ್ಯಾಂಕುಗಳಲ್ಲಿ 2016 ನಡೆದ ವ್ಯವಹಾರಗಳನ್ನು ವಿಶ್ಲೇಷಿಸಿದ ಎಸ್.ಎನ್.ಬಿ ಈ ವರದಿಯನ್ನು ತಯಾರಿಸಿದೆ. ಈ ಬ್ಯಾಂಕುಗಳಲ್ಲಿ ವಿವಿಧ ದೇಶಗಳ ಖಾತೆದಾರರು ಜಮೆ ಮಾಡಿದ ಹಣ ಮತ್ತು ಭಾರತೀಯರು ಜಮೆ ಮಾಡಿದ ಹಣದ ಮೊತ್ತವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ, ಭಾರತ 88ನೆಯ ಸ್ಥಾನಕ್ಕೆ ಇಳಿದಿದೆ ಎಂದು ತಿಳಿದು ಬಂದಿದೆ. ಬ್ರಿಟನ್, ಅಮೆರಿಕಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಲ್ಲಿವೆ. ಸ್ವಿಸ್ ಬ್ಯಾಂಕುಗಳಲ್ಲಿ ಹಣ ಇಟ್ಟಿರುವ ವಿದೇಶಿ ಖಾತೆದಾರರ ಹಣದಲ್ಲಿ ಶೇ.25 ರಷ್ಟು ಬ್ರಿಟನ್ ನಾಗರಿಕರಿಗೆ ಸೇರಿದ್ದರೆ, ಶೇ.14 ರಷ್ಟು ಅಮೆರಿಕನ್ನರಿಗೆ ಸೇರಿದೆ ಎಂದು ವರದಿ ಹೇಳಿದೆ. ಈ ವರದಿಯಲ್ಲಿ ಟಾಪ್ ಟೆನ್ ನಲ್ಲಿ ಇರುವ ಇತರೆ ದೇಶಗಳು ವೆಸ್ಟ್ ಇಂಡೀಸ್, ಫ್ರಾನ್ಸ್, ಬಹಮಾಸ್, ಜರ್ಮನಿ, ಗೆರ್ನೆಸೇ, ಜೆರ್ಸೀ, ಹಾಂಗ್ ಕಾಂಗ್ ಮತ್ತು ಲಕ್ಸಂಬರ್ಗ್.

ಭಾರತ ದೇಶ 2015ರಲ್ಲಿ 75 ಸ್ಥಾನದಲ್ಲಿ, 2014 ರಲ್ಲಿ 61 ಸ್ಥಾನದಲ್ಲಿ ಮತ್ತು 2007 ರವರೆಗೆ ಟಾಪ್ 50 ದೇಶಗಳಲ್ಲಿ ನಿಂತಿತ್ತು. 2004 ರಲ್ಲಿ 37 ನೇ ಸ್ಥಾನದಲ್ಲಿ ಇದ್ದಿದ್ದು ಗಮನಾರ್ಹ. ಇತ್ತೀಚೆಗಿನ ವರದಿ ಪ್ರಕಾರ ಭಾರತೀಯರು ಈ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪು ಹಣದ ಮೌಲ್ಯ ರೂ. 4,500 ಕೋಟಿ ಮಾತ್ರ.

ಕಪ್ಪು ಹಣ ಭೂತವನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಮಾಹಿತಿ ವರ್ಗಾವಣೆಗೆ ಭಾರತ- ಸ್ವಿಡ್ಜರ್ ಲ್ಯಾಂಡ್ ನಡುವೆ ಒಪ್ಪಂದವಾಗಿತ್ತು. ಎಸ್.ಎನ್.ಬಿ ವರದಿ ಹೇಳುತ್ತಿರುವ ವಿವರಗಳು ಸ್ವಿಸ್ ಅಧಿಕಾರಿಗಳು ಅಧಿಕೃತವಾಗಿ ಬಹಿರಂಗಪಡಿಸಿದ ಮಾಹಿತಿ ಆಧಾರದ ಮೇಲೆ ತಯಾರಿಸಲಾಗಿದೆ. ವಿವಿಧ ದೇಶಗಳಲ್ಲಿನ ಸಂಸ್ಥೆಗಳ ಹೆಸರಿನಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು, ಎನ್.ಆರ್.ಐ ಗಳು ಮತ್ತಿತರರು ಇಟ್ಟಿರುವ ಹಣವನ್ನು ಎಸ್.ಎನ್.ಬಿ ಅಧಿಕೃತ ಅಂಕಿ ಅಂಶಗಳಲ್ಲಿ ಸೇರಿಸಿಲ್ಲ ಎಂಬುದು ನೆನಪಿರಲಿ.

ಸ್ವಿಡ್ಜರ್ಲೆಂಡ್ ಬ್ಯಾಂಕಿಂಗ್ ಸಿಸ್ಟಮ್ ತುಂಬಾ ಗೌಪ್ಯತೆಯನ್ನು ಪಾಲಿಸುತ್ತದೆ. ಖಾತೆದಾರರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದಲೇ ಭಾರತೀಯರು ತಮ್ಮ ಕಪ್ಪು ಹಣವನ್ನು ಈ ಬ್ಯಾಂಕುಗಳಲ್ಲಿ ಇಡುತ್ತಾರೆ ಎಂಬ ಆರೋಪಗಳಿವೆ. ಆದರೆ ಈ ಕುರಿತು ಅಂತರಾಷ್ಟ್ರೀಯ ಒತ್ತಡ ಆರಂಭವಾದಾಗಿನಿಂದ ಭಾರತೀಯರು ತಮ್ಮ ಕಪ್ಪು ಹಣವನ್ನು ಇತರೆಡೆ ವರ್ಗಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಭಾರತೀಯರು ಸಿಂಗಾಪುರ, ಹಾಂಗ್ ಕಾಂಗ್ ಗಳಲ್ಲಿನ ಹಣಕಾಸು ಸಂಸ್ಥೆಗಳಲ್ಲಿ ಇಟ್ಟಿರುವ ಹಣಕ್ಕೆ ಹೋಲಿಸಿದರೆ ತಮ್ಮ ಬಳಿ ಜಮೆ ಮಾಡಿರುವ ಭಾರತೀಯರ ಹಣ ಬಹಳ ಕಡಿಮೆ ಎಂದು ಸ್ವಿಸ್ ಬ್ಯಾಂಕುಗಳು ಹೇಳುತ್ತಿವೆ.