ಸರಣಿ ಸ್ಪೋಟಗಳ ರೂವಾರಿ, ಮೋಸ್ಟೆಟ್ ವಾಂಟೆಡ್ ಉಗ್ರನ ಬಂಧನ

ಬಾಂಬ್ ತಯಾರಿಕೆಯಲ್ಲಿ ಪರಿಣಿತನಾಗಿರುವ, ಸಿಮಿ ಉಗ್ರ ಹಾಗೂ ಇಂಡಿಯನ್ ಮುಜಾಹಿದೀನ್ ಸ್ಥಾಪಕರಲ್ಲೊಬ್ಬನಾಗಿರುವ ಅಬ್ದುಲ್ ಸುಭಾನ್ ಖುರೇಶಿ ಅಲಿಯಾಸ್ ತೌಖೀರ್ ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

2008 ರ ಗುಜರಾತ್ ನಲ್ಲಿ ನಡೆದ ಸರಣಿ ಸ್ಪೋಟಗಳು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಖುರೇಶಿ ವಿರುದ್ಧ ಹಲವಾರು ಪ್ರಕರಣಗಳಿವೆ. ಇಂಟರ್ ಪೋಲ್ ಜಾರಿ ಮಾಡಿದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಖುರೇಷಿ ತಲೆಗೆ ರೂ.4 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು.

2008 ರಲ್ಲಿ ಗುಜರಾತ್ ನಲ್ಲಿ ನಡೆದ ಬಾಂಬ್ ಸ್ಪೋಟಗಳ ನಂತರ ಕಾಣೆಯಾಗಿದ್ದ ಖುರೇಶಿಗಾಗಿ ಹಲವು ರಾಜ್ಯಗಳ ಪೊಲೀಸರು ಹುಡುಕಾಟ ನಡೆಸಿದ್ದರು. ದೆಹಲಿಯಲ್ಲಿ ಆತ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪಡೆದ ದೆಹಲಿ ಪೊಲೀಸರು ಖುರೇಶಿ ಬಂಧನಕ್ಕೆ ಬಲೆ ಬೀಸಿದ್ದರು.

ಆತನನ್ನು ಹಿಡಿಯಲು ಕೈಗೊಂಡಿದ್ದ ಕಾರ್ಯಚರಣೆ ಸೋಮವಾರ ಮುಗಿದಿದ್ದು, ಖುರೇಶಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಉಗ್ರನನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಗುಂಡಿನ ದಾಳಿ ಪ್ರತಿದಾಳಿಗಳು ನಡೆದಿವೆ.

ಬೆಂಗಳೂರಿನಲ್ಲಿ ಸರಣಿ ಸ್ಪೋಟವಾದ ಮರುದಿನವೇ 2008 ರ ಜುಲೈ 26 ರಂದು ಅಹಮದಾಬಾದ್ ನಲ್ಲಿ ಹಲವು ಪ್ರದೇಶಗಳಲ್ಲಿ ಸರಣಿ ಸ್ಪೋಟಗಳು ಸಂಭವಿಸಿದ್ದವು. ಹಲವು ಸ್ಪೋಟಗಳು ಭಕ್ತರು ಹೆಚ್ಚಾಗಿರುವ ದೇವಸ್ಥಾನ, ಟ್ರಾಫಿಕ್ ಹೆಚ್ಚಾಗಿರುವ ಸ್ಥಳಗಳು, ಬಸ್ ನಿಲ್ದಾಣ, ಮಾರುಕಟ್ಟೆಗಳಲ್ಲಿ ನಡೆದಿದ್ದವು.

ಕೇವಲ 70 ನಿಮಿಷಗಳ ಅವಧಿಯಲ್ಲಿ 21 ಬಾಂಬುಗಳು ಸ್ಪೋಟಗೊಂಡಿದ್ದವು. ಒಟ್ಟು 56 ಜನರು ಈ ಸ್ಪೋಟಗಳಲ್ಲಿ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸ್ಪೋಟಗಳ ಹೊಣೆಯನ್ನು ಇಂಡಿಯನ್ ಮುಜಾಹಿದೀನ್ ಸಂಘಟನೆ ಹೇಳಿಕೊಂಡಿತ್ತು. ಈ ಸ್ಪೋಟಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತದಲ್ಲಿ ಬಾಂಬ್ ಸ್ಪೋಟಗಳನ್ನು ನಡೆಸಿದ ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಪಾಳಕ್ಕೆ ತೆರಳಿ ಅಲ್ಲಿ ಕೆಲವು ವರ್ಷಗಳ ಕಾಲ ವಾಸವಿದ್ದ ಖುರೇಶಿ, 2013 – 2015 ರ ನಡುವೆ ಸೌದಿ ಅರೇಬಿಯಾಗೂ ಹೋಗಿದ್ದ. ಭಾರತದಲ್ಲಿ ಮತ್ತೆ ಸಿಮಿ ಉಗ್ರ ಸಂಘಟನೆಗೆ ಜೀವ ತುಂಬಲು ವಾಪಸಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಮೋದ್ ಖುಶ್ವಾ ಹೇಳಿದ್ದಾರೆ. ಸಿಮಿ ಉಗ್ರ ಸಂಘಟನೆ ಸೇರುವ ಮುನ್ನ ಈತ ಹಲವು ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡಿದ್ದ.

Get Latest updates on WhatsApp. Send ‘Subscribe’ to 8550851559