ಭಾರತದಲ್ಲಿ ಇರಬೇಕಾದರೆ ವಂದೇ ಮಾತರಂ ಹಾಡಲೇಬೇಕು – News Mirchi

ಭಾರತದಲ್ಲಿ ಇರಬೇಕಾದರೆ ವಂದೇ ಮಾತರಂ ಹಾಡಲೇಬೇಕು

ವಂದೇಮಾತರಂ ಗೀತೆಯನ್ನು ಹಾಡಲೇಬೇಕು ಎಂದು ಮೇಯರ್, ಆಗಲ್ಲ ಎಂದು ಸಭೆ ಬಹಿಷ್ಕರಿಸಿದ ಮುಸ್ಲಿಂ ಸದಸ್ಯರು, ಭಾರತದಲ್ಲಿರಬೇಕಾದರೆ ವಂದೇ ಮಾತರಂ ಹಾಡಲೇಬೇಕು ಎಂದು ಬಿಜೆಪಿ ಕಾರ್ಪೊರೇಟರ್‌ಗಳ ಘೋಷಣೆಗಳು… ಹೀಗೆ ಉತ್ತರಪ್ರದೇಶದ ಮೀರತ್ ಮುನಿಸಿಪಲ್ ಕಾರ್ಪೊರೇಷನ್ ಸಭೆ ಬಿಸಿಯೇರಿತ್ತು.

ಮಂಗಳವಾರ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರೆಲ್ಲಾ ತಮ್ಮ ಸ್ಥಾನಗಳಲ್ಲಿ ಎದ್ದು ನಿಂತು ವಂದೇಮಾತರಂ ಹಾಡಿದರು. ಆದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಏಳು ಜನ ಮುಸ್ಲಿಂ ಸದಸ್ಯರು ಸಭೆಯಿಂದ ಹೊರನಡೆದರು. ಆ ಸಂದರ್ಭದಲ್ಲಿ, ಭಾರತದಲ್ಲಿರಬೇಕಾದರೆ ವಂದೇಮಾತರಂ ಹಾಡಲೇಬೇಕು ಎಂದು ಬಿಜೆಪಿ ಸದಸ್ಯರು ಜೋರಾಗಿ ಘೋಷಣೆಗಳನ್ನು ಕೂಗಿದರು.

ವಿವಾದ ಅಲ್ಲಿಗೆ ಮುಗಿಯಲಿಲ್ಲ. ವಂದೇಮಾತರಂ ಗೀತೆ ಮುಗಿದ ನಂತರ ಮತ್ತೆ ಸಭೆಗೆ ಆಗಮಿಸಲು‌ ಪ್ರಯತ್ನಿಸಿದ ಮುಸ್ಲಿಂ ಸದಸ್ಯರನ್ನು ಮೇಯರ್ ಹರಿಕಾಂತ್ ಅಹ್ಲುವಾಲಿಯಾ ಒಳಗೆ ಬರಲು ಅನುಮತಿ ನೀಡಲಿಲ್ಲ. ಅಷ್ಟೇ ಅಲ್ಲದೆ ಆ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಬೋರ್ಡ್ ತೀರ್ಮಾನಿಸಿತು. ಇದು ಗಂಭೀರ ವಿಷಯ, ವಂದೇಮಾತರಂ ಗೀತೆಯನ್ನು ಸದಸ್ಯರೆಲ್ಲರೂ ಕಡ್ಡಾಯವಾಗಿ ಹಾಡಬೇಕೆಂದು ಮೆಯರ್ ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಸದಸ್ಯರು, ಷರಿಯಾ ಕಾನೂನು ವಂದೇಮಾತರಂ ಗೀತೆ ಹಾಡಲು ಅಂಗೀಕರಿಸುವುದಿಲ್ಲ, ಈ ವಿಷಯದಲ್ಲಿ ನಾವು ಸಭೆಯನ್ನು ಬಹಿಷ್ಕರಿಸುತ್ತಲೇ ಇರುತ್ತೇವೆ, ಅಗತ್ಯ ಬಿದ್ದರೆ ಕೋರ್ಟ್ ಮೊರೆ ಹೋಗಲು ಹಿಂಜರಿಯುವುದಿಲ್ಲ ಎಂದರು.

Loading...