ಹಿಂದೂ ಯುವತಿಯೊಂದಿಗೆ ಪ್ರೀತಿ, ಯುವಕನ ಹತ್ಯೆ

ಜಾರ್ಖಂಡ್: ಹಿಂದೂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿ ಕೊಂದ ಅಮಾನವೀಯ ಕೃತ್ಯ ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಮೂಲಗಳ ಪ್ರಕಾರ, ಮಹಮದ್ ಶಕೀಲ್(20) ಎಂಬ ಯುವಕ ಹಿಂದೂ ಯುವತಿಯನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಈ ವಿಷಯ ತಿಳಿದ ಯುವತಿಯ ಕುಟುಂಬ ಸದಸ್ಯರು ಆಕೆಯಿಂದ ದೂರವಿರುವಂತೆ ಮೊದಲು ಯುವಕನಿಗೆ ಎಚ್ಚರಿಕೆ ನೀಡಿದ್ದರು. ಆದರೆ ಶ್ರೀರಾಮ ನವಮಿ ದಿನ ಈ ಇಬ್ಬರೂ ಪ್ರೇಮಿಗಳೂ ಭೇಟಿಯಾಗಿದ್ದರು. ನಂತರ ಯುವತಿಯನ್ನು ಆಕೆಯ ಮನೆಯ ಬಳಿ ಬಿಟ್ಟು ಬರಲು ಹೋದಾಗ ಯುವತಿಯ ಮನೆಯವರಿಗೆ ಯುವಕ ಸಿಕ್ಕಿಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬ ಸದಸ್ಯರು, ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿಯ ಕಣ್ಣೆದುರೇ ಆತನನ್ನು ಮರಕ್ಕೆ ಕಟ್ಟಿ ಬಡಿದರು.

ಎಷ್ಟು ಹೊತ್ತಾದರೂ ಯುವಕ ಶಕೀಲ್ ಮನೆಗೆ ವಾಪಸಾಗದ್ದರಿಂದ ಹುಡುಕಾಟ ನಡೆಸಿದ ಶಕೀಲ್ ಕುಟುಂಬಸ್ಥರಿಗೆ ಆತ ಗಂಭೀರ ಗಾಯಗಳಿಂದ ಪತ್ತೆಯಾದ. ಕೂಡಲೇ ಆಸ್ಪತ್ರೆ ದಾಖಲಿಸಿದರೂ ಗುರುವಾರ ರಾತ್ರಿ ಶಕೀಲ್ ಸಾವನ್ನಪ್ಪಿದ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್.ಪಿ ಚಂದನ್ ಕುಮಾರ್ ಝಾ ಹೇಳಿದ್ದಾರೆ. ವಿಚಾರಣೆಯಲ್ಲಿ ಯುವತಿ ನೀಡಿದ ಮಾಹಿತಿ ಪ್ರಕಾರ ಮೂವರನ್ನು ಬಂಧಿಸಿದ್ದೇವೆ, ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.