ನನ್ನ ಚಾಯ್‌ನಷ್ಟೇ ಸ್ಟ್ರಾಂಗ್ ನನ್ನ ನಿರ್ಧಾರಗಳು

ಘಾಜಿಪುರ್: ಪ್ರಧಾನಿ ಮೋದಿ ತಮ್ಮ ಭಾಷಣದ ನಡುವೆ ನಗೆ ಚಟಾಕಿ ಹಾರಿಸುವುದು ಸರ್ವೇ ಸಾಮಾನ್ಯ. ಸೋಮವಾರ ಬಿಜೆಪಿ ಪರಿವರ್ತನಾ ರ‌್ಯಾಲಿಯಲ್ಲಿಯೂ ಇದು ಮುಂದುವರೆಯಿತು. ಈ ವೇಳೆ ತಾವು ಟೀ ಮಾರಿದ ದಿನಗಳ ಬಗ್ಗೆ ನೆನಪಿಸಿಕೊಂಡ ಮೋದಿ, ನನ್ನ ಟೀ ಎಷ್ಟು ಸ್ಟ್ರಾಂಗ್ ಇರುತ್ತದೆಯೋ ನನ್ನ ತೀರ್ಮಾನಗಳೂ ಅಷ್ಟೇ ಸ್ಟ್ರಾಂಗ್ ಆಗಿ ಇರುತ್ತವೆ ಎಂದರು. ಈ ಮಾತಿಗೆ ಜನ ಜೋರಾಗಿ ಕೇಕೆ ಹಾಕಿದರು.

ನಾನು ಸಣ್ಣವನಿದ್ದಾಗ ಟೀ ಮತ್ತಷ್ಟು ಸ್ಟ್ರಾಂಗ್ ಆಗಿರಲಿ ಎಂದು ಜನ ಕೇಳುತ್ತಿದ್ದರು. ಈಗ ನನ್ನ ನಿರ್ಧಾರಗಳೂ ಸಹಾ ಅಷ್ಟೇ ಸ್ಟ್ರಾಂಗ್ ಆಗಿರುತ್ತವೆ. ನಾನು ರೈಲ್ವೇ ಪ್ಲಾಟ್ ಫಾರ್ಮ್ ಮೇಲೆ ಟೀ ಮಾರುತ್ತಿದ್ದೆ ಎಂದು ಮೋದಿ ಬಹಿರಂಗ ಸಮಾವೇಶದಲ್ಲಿ ಹೇಳಿದರು. ರೂ. 2.5 ಲಕ್ಷ ಜಮೆ ಮಾಡುವವರಿಗೆ ಅಧಿಕಾರಿಗಳು ಏನೂ ಮಾಡುವುದಿಲ್ಲ, ಆದರೆ 2.5 ಕೋಟಿ ಇರುವವರನ್ನು ಮಾತ್ರ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅವರು ತಮ್ಮ ಮಂಚಗಳ ಹಾಸಿಗೆಗಳ ಕೆಳಗೆ ಅಡಗಿಸಿದರೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ನೋಟು ರದ್ದು ತೀರ್ಮಾನಕ್ಕೆ ಜನಸಾಮಾನ್ಯರು ಬೆಂಬಲಿಸುತ್ತಿದ್ದರೆ, ಕಪ್ಪು ಕುಬೇರರು ಮಾತ್ರ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ ಎಂದರು. ಹಳೆಯ ನೋಟು ರದ್ದುಗೊಂಡಿದ್ದರಿಂದ ಬಡವರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದರೆ, ಆದಾಯ ತೆರಿಗೆ ಯಾಮಾರಿಸಿದವರು ಮಾತ್ರ ನಿದ್ದೆ ಮಾತ್ರೆ ಸೇವಿಸುತ್ತಿದ್ದಾರೆ, ಭ್ರಷ್ಟರೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.