ಡೀಸೆಲ್ ಹೋಮ್ ಡೆಲಿವರಿ ಪಡೆಯುತ್ತಿರುವ ಪ್ರಥಮ ನಗರ ನಮ್ಮ ಬೆಂಗಳೂರು!

ನಮಗೇನೇ ಬೇಕಿದ್ದರೂ ಮಾರುಕಟ್ಟೆಗೆ ಹೋಗಿ ಖರೀದಿಸಬೇಕೆಂದೇನೂ ಇಲ್ಲ. ಫೋನ್ ಹಿಡಿದು ಆರ್ಡರ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಬೇಕಾದ್ದು ಬಂದು ಬೀಳುತ್ತದೆ. ಹೋಮ್ ಡೆಲಿವರಿ ಸೇವೆಗಳು ಅಷ್ಟೊಂದು ಬೆಳೆದಿವೆ. ಇದೇ ರೀತಿ ವಾಹನ ಸವಾರರು ಗಂಟೆಗಟ್ಟಲೆ ಪೆಟ್ರೋಲ್ ಬಂಕುಗಳ ಬಳಿ ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲದೆ, ಡೀಸೆಲ್ ನಮ್ಮ ಮನೆಗೇ ಡೆಲಿವರಿ ಮಾಡುತ್ತಿದೆ ಒಂದು ಸ್ಟಾರ್ಟಪ್ ಕಂಪನಿ. ಮನೆಗೆ ಡೀಸೆಲ್ ಡೆಲಿವರಿ ಸೇವೆ ಪಡೆಯುತ್ತಿರುವ ದೇಶದ ಮೊಟ್ಟ ಮೊದಲ ನಗರ ಬೆಂಗಳೂರು ಆಗಿರುವುದು ಸಂತಸದ ವಿಷಯ.

ಐಐಟಿ ಧನ್ಬಾದ್ ಹಳೆಯ ವಿದ್ಯಾರ್ಥಿ ಅಶೀಷ್ ಕುಮಾರ್ ಗುಪ್ತಾ “ಮೈ ಪೆಟ್ರೋಲ್ ಪಂಪ್” ಹೆಸರಿನಲ್ಲಿ ಈ ಸ್ಟಾರ್ಟಪ್ ಅನ್ನು ಆರಂಭಿಸಿದ್ದಾರೆ. ಈ ಸ್ಟಾರ್ಟಪ್ ನಿಂದ ಡೀಸೆಲ್ ಅನ್ನು ಮನೆಗೇ ತಲುಪಿಸುತ್ತಿದ್ದಾರೆ. ಮನೆ ಬಾಗಿಲಿಗೆ ಡೀಸೆಲ್ ಸರಬರಾಜು ಮಾಡುತ್ತಿರುವ ಮೊಟ್ಟ ಮೊದಲ ಕಂಪನಿಯಾಗಿ ಗುರುತಿಸಿಕೊಂಡಿದೆ ಈ ಕಂಪನಿ. ಜೂನ್ 15 ರಿಂದ ಈ ಕಂಪನಿ ಈ ಸೇವೆಗಳನ್ನು ಆರಂಭಿಸಿದೆ. 950 ಲೀಟರ್ ಸಾಮರ್ಥ್ಯದ ಮೂರು ಡೆಲಿವರಿ ವಾಹನಗಳನ್ನು ಈ ಸಂಸ್ಥೆ ಹೊಂದಿದೆ. ಇದುವರೆಗೂ ಇದು 5 ಸಾವಿರ ಲೀಟರ್ ಗೂ ಅಧಿಕ ಡೀಸೆಲ್ ಅನ್ನು ಡೆಲಿವರಿ ಮಾಡಿದೆ. ನಿಗದಿತ ಡೆಲಿವರಿ ಶುಲ್ಕ ವಸುಲಿ ಮಾಡಿ ಮಾರುಕಟ್ಟೆಯಲ್ಲಿ ಸದ್ಯ ಜಾರಿಯಲ್ಲಿರುವ ದರಕ್ಕೇ ಅವರು ಡೀಸೆಲ್ ಅನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.

100 ಲೀಟರ್ ವರೆಗಿನ ಡೀಸೆಲ್ ಡೆಲಿವರಿಗೆ ರೂ.99 ಚಾರ್ಜ್ ಮಾಡುವ ಇವರು, 100 ಲೀಟರ್ ಗೂ ಹೆಚ್ಚಿನ ಡೀಸೆಲ್ ಆರ್ಡರ್ ಮಾಡಿದರೆ ಮಾರುಕಟ್ಟೆಯಲ್ಲಿನ ಡೀಸೆಲ್ ದರದ ಮೇಲೆ ಪ್ರತಿ ಲೀಟರ್ ಗೆ 1 ರೂಪಾಯಿಯಂತೆ ಸೇರಿಸಿ ಕೊಡಬೇಕಾಗುತ್ತದೆ. ಈ ಕಂಪನಿಗೆ 16 ಶಾಲೆಗಳೂ (ಸುಮಾರು 300 ಬಸ್ ಗಳು) ಸೇರಿದಂತೆ 20 ರೆಗ್ಯುಲರ್ ಗ್ರಾಹಕರಿದ್ದಾರೆ, ಉಚಿತ ಮೊಬೈಲ್ ಆಪ್ ಡೌನ್ ಲೋಡ್ ಮಾಡುವ ಮೂಲಕ ಅಥವಾ ಆನ್ಲೈನ್, ಫೋನ್ ಕರೆ ಮೂಲಕ ಡೀಸೆಲ್ ಅನ್ನು ವಾಹನ ಸವಾರರು ಆರ್ಡರ್ ಮಾಡಬುದು.

ಕಳೆದ ಏಪ್ರಿಲ್ ನಲ್ಲಿಯೇ ಪೆಟ್ರೋಲ್, ಡೀಸೆಲ್ ಅನ್ನು ಮನೆಯಂಗಳಕ್ಕೇ ಡೆಲಿವರಿ ಮಾಡಲು ಅವಕಾಶಗಳಿವೆ ಎಂದು ಇಂಧನ ಇಂಧನ ಸಚಿವಾಲಯ ಟ್ವೀಟ್ ಮಾಡಿತ್ತು. ಮುಂಗಡ ಬುಕಿಂಗ್ ನೊಂದಿಗೆ ಡೋರ್ ಡೆಲಿವರಿ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಹೇಳಿತ್ತು. ಇದರಿಂದಾಗಿ ಬಂಕುಗಳ ಬಳಿ ಕ್ಯೂನಲ್ಲಿ ನಿಲ್ಲುವುದು ಕಡಿಮೆ ಮಾಡಬಹುದು ಎಂದು ಇಂಧನ ಸಚಿವಾಲಯ ಹೇಳಿತ್ತು.