ಹೊಸ ನೋಟು ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದ ಮೈಸೂರು

ಪ್ರಧಾನಮಂತ್ರಿ 500, 1000 ಮುಖಬೆಲೆಯ ನೋಟು ರದ್ದಾಗಿದೆ ಎಂದು ಪ್ರಕಟಿಸುವ ಹೊತ್ತಿಗೆ ಭಾರೀ ಪ್ರಮಾಣದಲ್ಲಿ ಹೊಸ ನೋಟುಗಳು ರಿಸರ್ವ್ ಬ್ಯಾಂಕಿಗೆ ತಲುಪಿತ್ತು. ಆದರೆ ಇವೆಲ್ಲವನ್ನೂ ಎಲ್ಲಿ ಮುದ್ರಿಸಲಾಯಿತು? ಹೇಗೆ ಸಾಗಿಸಿದರು ಎಂಬುದು ಮಾತ್ರ ಕುತೂಹಲ. ಕಳೆದ ಆರು ತಿಂಗಳಿನಿಂದ ಖಾಸಗಿ ವಿಮಾನದಲ್ಲಿ ದೆಹಲಿಯ ರಿಸರ್ವ್ ಬ್ಯಾಂಕ್ ಪ್ರಧಾನ ಕಛೇರಿಗೆ ಸಾಗಿಸುತ್ತಲೇ ಇದ್ದಾರೆ.

ಇಷ್ಟು ದಿನ ಮೈಸೂರಿನಲ್ಲಿ ವಿಮಾನ ನಿಲ್ದಾಣವೇಕೆ? ಅಲ್ಲಿ ವಿಮಾನ ನಿಲ್ದಾಣದ ಅವಶ್ಯಕತೆಯೇ ಇಲ್ಲ ಎನ್ನುತ್ತಿದ್ದವರು ಈಗ ವಿಷಯ ತಿಳಿದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಇಲ್ಲಿ ಒಂದೇ ಒಂದು ರನ್ ವೇ ಇದೆ. ಅಲ್ಲಿಂದಲೇ ದೆಹಲಿಯ ರಿಸರ್ವ್ ಬ್ಯಾಂಕಿನ ವಿವಿಧ ಶಾಖೆಗಳಿಗೆ ಹೊಸ ನೋಟುಗಳು ತಲುಪಿದ್ದು. ಕೆಲವೇ ಜನರಿಗೆ ಹೊರತು ಪಡಿಸಿ ಇತರರಿಗೆ ತಿಳಿಯದಂತೆ ಅತ್ಯಂತ ರಹಸ್ಯವಾಗಿ ಈ ಕೆಲಸ ಪೂರ್ಣಗೊಳಿಸುವಲ್ಲಿ ಮೈಸೂರು ವಿಮಾನ ನಿಲ್ದಾಣದ್ದು ಪ್ರಮುಖ ಪಾತ್ರ.

500, 1000 ರ ನೋಟು ಇನ್ನು ಚಲಾವಣೆಯಿಲ್ಲ ಎಂದು ಮೋದಿ ಹೇಳುವ ಹೊತ್ತಿಗೆ ಹೊಸ ನೋಟುಗಳು ವಿವಿಧ ನಗರಗಳ ರಿಸರ್ವ್ ಬ್ಯಾಂಕುಗಳಿಗೆ ತಲುಪಿಯಾಗಿತ್ತು, ಅಲ್ಲಿಂದ ಎಲ್ಲಾ ಬ್ಯಾಂಕುಗಳಿಗೆ ಸಾಗಿಸಿದರು. ಮೈಸೂರಿನಲ್ಲಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯ ಲಿಮಿಟೆಡ್ ನಲ್ಲಿ ಬಿಗಿ ಭದ್ರತೆಯ ನಡುವೆ ಈ ನೋಟು ಮುದ್ರಣವಾಗಿತ್ತು. ಈ ಮುದ್ರಣಾಲಯಕ್ಕೆ ಪ್ರತ್ಯೇಕ ರೈಲ್ವೇ ಹಳಿ, ನೀರಿನ ಪೈಪ್ ಲೈನ್ ಕೂಡಾ ಇದೆ. ಎರಡು ದಶಕಗಳ ಈ ಪ್ರೆಸ್ ಗೆ ವಿಶ್ವದಲ್ಲೇ ಅತ್ಯುತ್ತಮ ಪ್ರೆಸ್‌ಗಳಲ್ಲಿ ಒಂದು ಎಂಬ ಹೆಸರೂ ಇದೆ. ಇಲ್ಲಿ ನೋಟು ಮುದ್ರಣಕ್ಕೆ ಬೇಕಾಗುವ ಪೇಪರ್ ತಯಾರಿಕಾ ಘಟಕವೂ ಇದೆ.

ಆರು ತಿಂಗಳ ಹಿಂದೆಯೇ 2 ಸಾವಿರ ರುಪಾಯಿಯ ನೋಟು ಮುದ್ರಣ ಆರಂಭವಾದರೂ, ಈ ವಿಷಯ ಯಾರಿಗೂ ತಿಳಿಯಲಿಲ್ಲ.  ಪ್ರತಿಯೊಂದು ಬ್ಯಾಂಕ್‌ಗೂ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ರೂ.20 ಲಕ್ಷದಿಂದ ರೂ. 2 ಕೋಟಿಯವರೆಗೂ ಹೊಸ ಕರೆನ್ಸಿ ಸರಬರಾಜು ಮಾಡಲಾಯಿತು. ಕೇವಲ ಹೊಸ ನೋಟು ಸಾಗಿಸಲು ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆಯಲಾಗಿತ್ತು. ಇದಕ್ಕಾಗಿ ಪಾವತಿಸಿದ್ದು ರೂ. 73.42 ಲಕ್ಷ.