ಪ್ರವಾಸಿಗರನ್ನು ಸೆಳೆಯುವ ನಂದಿ ಬೆಟ್ಟ

ಬೆಂಗಳೂರಿನಿಂದ ಸುಮಾರು 60 ಕಿ.ಮೀ ಮತ್ತು ಚಿಕ್ಕಬಳ್ಳಾಪುರದಿಂದ ಕೇವಲ 10 ಕಿ.ಮೀ ದೂರದಲ್ಲಿ ರಾಜ್ಯದ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟವಿದೆ. ಇಲ್ಲಿ ಪ್ರಾಚೀನ ಕೋಟೆ, ಅಂದಿನ ರಾಜರ ವಿಶ‍್ರಾಂತಿ ಗೃಹಗಳಿವೆ. ಇದನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ವಹಿಸುತ್ತಿದೆ.

ಚೋಳರ ಕಾಲದಲ್ಲಿ ಈ ಬೆಟ್ಟಕ್ಕೆ “ಆನಂದ ಗಿರಿ” ಎಂದು ಕರೆಯಲಾಗುತ್ತಿತ್ತು ಎನ್ನುತ್ತಾರೆ. ಗಂಗರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದು, ನಂತರ ಟಿಪ್ಪು ಸುಲ್ತಾನ್ ಅದನ್ನು ಪುನರ್ ನಿರ್ಮಾಣ ಮಾಡಿ ಬೇಸಿಗೆ ಶಿಬಿರವನ್ನಾಗಿ ಬಳಸಿಕೊಳ್ಳುತ್ತಿದ್ದನಂತೆ. ಬೆಟ್ಟದ ಮೇಲೆ 1200 ವರ್ಷಗಳ ಹಿಂದೆ ನಿರ್ಮಿಸಿದ ನಂದೀಶ್ವರ ದೇವಾಲಯವಿದೆ. ನಂದೀಶ್ವರ ಯೋಗಿ ಇಲ್ಲಿ ತಪ್ಪಸ್ಸು ಮಾಡಿದ್ದರಿಂದಾಗಿ ಈ ಬೆಟ್ಟಕ್ಕೆ ನಂದಿ ಬೆಟ್ಟ ಎಂದು ಹೆಸರಾಯಿತು ಎನ್ನಲಾಗುತ್ತಿದೆ.

ಬೆಟ್ಟದ ಮೇಲೆ ಪಾರ್ವತಿ ಪರಮೇಶ್ವರರ ದೇವಾಲಯ, ಉಗ್ರ ನರಸಿಂಹ, ಯೋಗ ನರಸಿಂಹ ಆಲಯಗಳಿವೆ. ಸಮುದ್ರ ಮಟ್ಟದಿಂದ 1478 ಮೀಟರ್ ಎತ್ತರದಲ್ಲಿರುವ ನಂದಿ ಬೆಟ್ಟದಲ್ಲಿ ಲಾರ್ಡ್ ಕಬ್ಬನ್ ನಿರ್ಮಿಸಿದ 18 ಕೊಠಡಿಗಳ ಕಟ್ಟಡವಿದೆ. ಮಹಾತ್ಮಾ ಗಾಂಧಿ, ನೆಹರೂ, ರಾಜೀವ್ ಗಾಂಧಿ, ಮಾರ್ಕ್ ಕಬ್ಬನ್, ಕ್ವೀನ್ ಎಲಿಜಬೆತ್-2 ಮುಂತಾದವರು ಇಲ್ಲಿ ಉಳಿದುಕೊಂಡಿರುವ ಇತಿಹಾಸವಿದೆ.

ನಂದಿ ಬೆಟ್ಟದಿಂದ 21 ಕಿ.ಮೀ ದೂರದಲ್ಲಿ ಮುದ್ದೇನಹಳ್ಳಿ ಇದೆ. ಸರ್.ಎಂ.ವಿಶ್ವೇಶ್ವರಯ್ಯ ನವರ ಮ್ಯೂಸಿಯಂ ಇಲ್ಲಿ ನೋಡಬಹುದಾಗಿದೆ. ಆಂಜನೇಯ, ಭೋಗನಂದೀಶ್ವರ ದೇವಾಲಯಗಳು ಇಲ್ಲಿವೆ.

ಇಲ್ಲಿ ವಸತಿಗಾಗಿ ನಂದಿ ಬೆಟ್ಟದ ಮೇಲೆ ಕರ್ನಾಟಕ ಪ್ರವಾಸೋದ್ಯ ಇಲಾಖೆಯ ಮಯೂರಿ ರೆಸಾರ್ಟ್, ಹೋಟೆಲ್ ಗಳಿವೆ. ಚಿಕ್ಕಬಳ್ಳಾಪುರದಲ್ಲಿ ಲಾಡ್ಜ್ ಗಳು ಲಭ್ಯವಿರುತ್ತವೆ.