ಅಮ್ಮನ ಆಶೀರ್ವಾದ ಪಡೆದ 67 ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ – News Mirchi

ಅಮ್ಮನ ಆಶೀರ್ವಾದ ಪಡೆದ 67 ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ

ಮೂರು ವರ್ಷದ ಹಿಂದೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ದಾಮೋದರ ದಾಸ್ ಮೋದಿ ಯವರನ್ನು ಕಂಡು ದೇಶವೇ ಸಂಭ್ರಮದಲ್ಲಿ ಮುಳುಗಿತ್ತು. ಈ ವಿಶೇಷ ಕ್ಷಣಗಳನ್ನು ಮನೆಯಲ್ಲೇ ಕೂತು ನೋಡಿದ ಮೋದಿಯವರ ತಾಯಿ, 95 ವರ್ಷದ ಹೀರಾಬೆನ್ ಕಣ್ಣು ಸಂತೋಷದಿಂದ ಒದ್ದೆಯಾಗಿತ್ತು. ತಮ್ಮ ಮಗ ದೇಶ ಸೇವೆ ಅರ್ಪಿಸಿಕೊಂಡಿದ್ದಕ್ಕಿಂತ ತನಗಿನ್ನೇನು ಬೇಕು ಎಂಬಂತಿದ್ದರು ಆಕೆ.

ಅದಾದ ನಾಲ್ಕು ತಿಂಗಳ ನಂತರ ತಮ್ಮ ಹುಟ್ಟಿದ ದಿನದಂದು ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು ಮೋದಿ. ಆ ಸಂದರ್ಭದಲ್ಲಿ ತಾವು ಕೂಡಿಟ್ಟಿದ್ದ 5,001 ರೂಪಾಯಿಗಳನ್ನು ಕಾಶ್ಮೀರ ಪ್ರವಾಹ ಸಂತ್ರಸ್ತರಿಗಾಗಿ ಹೀರಾಬೆನ್ ತಮ್ಮ ಮಗ ಮೋದಿಯವರಿಗೆ ನೀಡಿದರು. ಅದಾದ ನಂತರ 2016 ರಲ್ಲಿಯೂ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು ಮೋದಿ. 2015 ರಲ್ಲಿ ಮಾತ್ರ ಅಮೆರಿಕಾ ಪ್ರವಾಸದಲ್ಲಿದ್ದಾಗ ಅಮ್ಮನನ್ನು ನೆನೆಸಿಕೊಂಡು ಕಣ್ಣೀರಾಗಿದ್ದರು ಮೋದಿ.

ಫೇಸ್ಬುಕ್ ಸಿಇಒ ಜುಕರ್ ಬರ್ಗ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ಜುಕರ್ ಬರ್ಗ್ ಕೇಳಿದ “ನಿಮ್ಮ ಜೀವನದಲ್ಲಿ ನಿಮ್ಮ ತಾಯಿಯ ಪಾತ್ರವೇನು”? ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ, ಮೋದಿಯವರ ಮುಖದಲ್ಲಿನ ಭಾವ ಒಮ್ಮೆಲೇ ಬದಲಾಯಿತು. ತಮ್ಮನ್ನು ಬೆಳೆಸಲು ತಾಯಿ ಪಟ್ಟ ಕಷ್ಟವನ್ನು ನೆನೆಸಿಕೊಂಡು ಕಣ್ಣೀರಾದರು. ತಮ್ಮ ಜೀವನದಲ್ಲಿ ತಂದೆತಾಯಿಗಳ ಪಾತ್ರ ತುಂಬಾ ಮಹತ್ವದ್ದು ಎಂದು ಅವರು ಹೇಳಿದರು.

ತಮ್ಮದು ತುಂಬಾ ಬಡಕುಟುಂಬವಾಗಿದ್ದು, ತಾನು ರೈಲ್ವೇ ನಿಲ್ದಾಣದಲ್ಲಿ ಟೀ ಮಾರುತ್ತಿದ್ದೆ ಎಂದು ನೆನಪಿಸಿಕೊಂಡರು. ಸಣ್ಣ ಮಕ್ಕಳಾದ ತಮ್ಮನ್ನು ಪೋಷಿಸಲು ಅಮ್ಮ ನೆರೆಹೊರೆಯ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು, ಮುಸುರೆ ತಿಕ್ಕಿದ್ದರು ಎಂದು ಹೇಳಿದ್ದರು. ತನ್ನ ತಾಯಿ ಮಾತ್ರವಲ್ಲದೇ ಭಾರತದಲ್ಲಿ ಹಲವಾರು ಅಮ್ಮಂದಿರು ತಮ್ಮ ಮಕ್ಕಳನ್ನು ಪೋಷಿಸಲು ತಮ್ಮ ಜೀವನವನ್ನು ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿ ಭಾವೋದ್ವೇಗಕ್ಕೊಳಗಾದರು.

[ಇದನ್ನೂ ಓದಿ: ಸಾಕಾರಗೊಂಡ 5 ದಶಕಗಳ ಕನಸು, ವಿಶ್ವದ 2ನೇ ಅತಿ ದೊಡ್ಡ ಯೋಜನೆ ಲೋಕಾರ್ಪಣೆ]

ಹೀಗೆ ತಾಯಿಯ ಕುರಿತು ತಮ್ಮ ಸಂಬಂಧವನ್ನು ಆಗಾಗ ನೆನಪಿಸಿಕೊಳ್ಳುವ ಪ್ರಧಾನಿ ಮೋದಿಯವರು ಇಂದು 67 ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿರೀಕ್ಷಿಸಿದಂತೆ ಬೆಳಗ್ಗೆಯೇ ತಮ್ಮ ತಾಯಿಯ ದರ್ಶನ ಮಾಡಿ ಆಶೀರ್ವಾದ ಪಡೆದರು. ಅಮ್ಮನೊಂದಿಗೆ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತಾಡಿದರು. ನಂತರ ವಿಶ್ವದ ಎರಡನೇ ಅತಿ ದೊಡ್ಡ ಡ್ಯಾಮ್ ಅದ ಸರ್ದಾರ್ ಸರೋವರ್ ಡ್ಯಾಮ್ ಅನ್ನು ಲೋಕಾರ್ಪಣೆ ಮಾಡಿದರು.

Get Latest updates on WhatsApp. Send ‘Add Me’ to 8550851559

Loading...