ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ – News Mirchi

ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ

ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಗುರುವಾರ ಅಹಮದಾಬಾದಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಅಹಮದಾಬಾದ್ ಮತ್ತು ಮುಂಬೈ ನಡುವೆ ಈ ಹೈಸ್ಪೀಡ್ ರೈಲು ಓಡಾಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ, “ಮೇಕ್ ಇನ್ ಇಂಡಿಯಾ” ಯೋಜನೆಗೆ ಜಪಾನ್ ಬದ್ಧವಾಗಿದೆ ಎಂದು ಹೇಳಿದರು. ನವ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಮತ್ತು ಅದರಲ್ಲಿ ಪಾಲುದಾರರನ್ನಾಗಿ ಆಯ್ಕೆ ಮಾಡಿರುವ ಆತ್ಮೀಯ ಸ್ನೇಹಿತ ನರೇಂದ್ರ ಮೋದಿಯವರು ತುಂಬಾ ದೂರದೃಷ್ಟಿಯುಳ್ಳ ನಾಯಕರಾಗಿದ್ದಾರೆ. ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಶಿಂಜೋ ಹೇಳಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರೈಲ್ವೇ ಸಚಿವ ಪಿಯೂಷ್ ಗೋಯೆಲ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮುಂತಾದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೇ ಸಚಿವ ಪಿಯೂಷ್ ಗೋಯೆಲ್, ಈ ಬುಲೆಟ್ ರೈಲು ಯೋಜನೆಯು ಭಾರತ ಮತ್ತು ಜಪಾನ್ ಜನತೆಯ ಸಹೋದರತ್ವದ ಸಂಕೇತವಾಗಿದೆ ಎಂದು ಬಣ್ಣಿಸಿದರು.

ಅಹಮದಾಬಾದ್ – ಮುಂಬೈ ಬುಲೆಟ್ ರೈಲು ಯೋಜನೆಯು ಸುಮಾರು 1.08 ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದ್ದು, ಇದಕ್ಕಾಗಿ ಜಪಾನ್ ಸರ್ಕಾರ ಶೇ.81 ರಷ್ಟು ಸಾಲ ನೀಡಲಿದೆ. ಅಹಮದಾಬಾದ್ ಮತ್ತು ಮುಂಬೈ ನಡುವೆ ಸುಮಾರು 650 ಕಿ.ಮೂ ದೂರವನ್ನು ಇದು 2 ಗಂಟೆಗಳಲ್ಲಿ ಇದು ಕ್ರಮಿಸುತ್ತದೆ.

Get Latest updates on WhatsApp. Send ‘Add Me’ to 8550851559

Loading...