ಜನರಿಂದ ದೋಚಿದ್ದನ್ನೆಲ್ಲಾ ಕಕ್ಕಲೇಬೇಕು : ಮೋದಿ

ನವದೆಹಲಿ: ಜನರ ಹಣವನ್ನು ಲೂಟಿ ಮಾಡಿದವರೆಲ್ಲಾ ಜನರಿಗೆ ವಾಪಸ್ ನೀಡಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ಮುಂದೆ ತಪ್ಪು ಲೆಕ್ಕ ತೋರಿಸಿ, ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕ್ರಮಗಳು ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ನೋಟು ರದ್ದು ನಂತರ ಅಕ್ರಮಗಳಿಗೆ ಮುಂದಾದ 1 ಲಕ್ಷಕ್ಕೂ ಹೆಚ್ಚು ಕಂಪನಿಗಳ ರಿಜಿಸ್ಟ್ರೇಷನ್ ಗಳನ್ನು ರದ್ದುಗೊಳಿಸಿದ್ದೇವೆ. ಕಪ್ಪು ಹಣವನ್ನು ಬಚ್ಚಿಡಲು ಸಹಕರಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇನ್ಸ್’ಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಸಂಸ್ಥಾಪನಾ ದಿನದ ಅಂಗವಾಗಿ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎ ಗಳನ್ನು ಉದ್ದೇಷಿಸಿ ಮೋದಿ ಭಾಷಣ ಮಾಡಿದರು.

ನಿಮ್ಮ ಗಿರಾಕಿಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿದ್ದೇವೆ ಎಂದು ಹೆಮ್ಮೆ ಪಡುವುದಕ್ಕಿಂತ, ಅವರೆಲ್ಲಾ ತೆರಿಗೆ ಸಲ್ಲಿಸುವಂತೆ ಮಾಡಲು ಪ್ರತಿಜ್ಞೆ ಮಾಡಬೇಕು ಎಂದು ಎಲ್ಲಾ ಸಿಎ ಗಳಿಗೆ ಸಲಹೆ ನೀಡಿದರು. ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯೊಂದಿಗೆ ದೇಶವನ್ನು ಲೂಟಿ ಮಾಡಿದವರಿಂದ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸ್ವಚ್ಛ ಮಾಡುವ ಕಾರ್ಯಕ್ರಮವನ್ನೂ ಕೈಗೊಂಡಿದೆ ಎಂದು ಹೇಳಿದರು. ಒಂದು ರಾಜಕೀಯ ಪಕ್ಷವಾಗಿ ಇಂತಹ ಕಠಿಣ ತೀರ್ಮಾನಗಳು ಕೈಗೊಳ್ಳುವುದು ಕಷ್ಟ ಎಂದು ತಿಳಿದಿದೆ, ಆದರೆ ದೇಶಕ್ಕಾಗಿ ಯಾರೋ ಒಬ್ಬರು ಮುಂದಾದರೆ ಮಾತ್ರ ಬದಲಾವಣೆಗೆ ನಾಂದಿ ಹಾಡಲು ಸಾಧ್ಯ ಎಂದರು. ಈ ಕಾರ್ಯಕ್ರಮದಲ್ಲಿ ಸಿಎಗಳೊಂದಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ, ಜಿ.ಎಸ್.ಟಿ ಕೌನ್ಸಿಲ್ ಸದಸ್ಯರು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಂಡೋಸ್ 10 ಅಪ್ಡೇಟ್: ಭಾರತೀಯರಿಗಾಗಿ ಭಾರೀ ರಿಯಾಯಿತಿಗೆ ಕೇಂದ್ರದ ಬೇಡಿಕೆ

ಜಿ.ಎಸ್.ಟಿ ಜಾರಿ ಮೂಲಕ ನವಭಾರತ ನಿರ್ಮಾಣದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಪಾತ್ರ ಪ್ರಮುಖವಾಗಿದೆ. ದೇಶದ ಅಭಿವೃದ್ಧಿಯಲ್ಲಿ ನೀವೆಲ್ಲಾ ಪಾಲುದಾರರಾಗಬೇಕು ಎಂದು ಮೋದಿ ಕರೆ ನೀಡಿದರು. ಆಗ ಸ್ವಾತಂತ್ರ್ಯ ಹೋರಾಟದಲ್ಲಿ ಹಲವರು ವಕೀಲರಾಗಿ ಸೇವೆ ಸಲ್ಲಿಸಿದರು. ಈಗ ದೇಶದ ಆರ್ಥಿಕ ಅಭಿವೃದ್ಧಿ ಪ್ರಯಾಣದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಕೂಡಾ ಆಧಾರ ಸ್ತಂಭವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು. ದಶಕಗಳಿಂದ ಜನರ ಹಣವನ್ನು ಲೂಟಿ ಮಾಡುತ್ತಿದ್ದವರು, ಅದನ್ನೆಲ್ಲಾ ಪುನಃ ಜನರಿಗೆ ನೀಡಲೇಬೇಕು. ನೋಟು ರದ್ದು ನಂತರ ಎಲ್ಲರಿಗಿಂತ ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡಿದ್ದು ಚಾರ್ಟರ್ಡ್ ಅಕೌಂಟೆಂಟ್ ಗಳು ಎಂದು ನಯವಾಗಿಯೇ ನಗುತ್ತಾ ಚಿವುಟಿದರು.

ಕಪ್ಪು ಹಣ ಇರುವವರು ಕಂಡರೆ ಅವರಿಗೆ ಎಚ್ಚರಿಸಿ. ದೇಶಾದ್ಯಂತ ರೂ.10 ಲಕ್ಷ ಆದಾಯ ಮೀರಿದವರು ಕೇವಲ 32 ಲಕ್ಷ ಜನರೇ ಇದ್ದಾರೆಂದು ಲೆಕ್ಕದಲ್ಲಿ ಕಾಣುತ್ತಿದೆ. ಆದರೆ ಕೆಲ ಕೋಟಿಗಳಷ್ಟು ಜನ ಉನ್ನತ ಹುದ್ದೆಗಳಲ್ಲಿ, ವ್ಯಾಪಾರಗಳಲ್ಲಿದ್ದಾರೆ. ಎರಡೂವರೆ ಕೋಟಿ ಜನ ವಿದೇಶಿ ಪ್ರವಾಸಕ್ಕೆ ಹೋಗಿದ್ದಾರೆ. ಇವರೆಲ್ಲರ ವಿಷಯವೇನು ಎಂದು ಪ್ರಶ್ನಿಸಿದ್ದಾರೆ. ಕಳೆದ 11 ವರ್ಷಗಳಿಂದ ಭ್ರಷ್ಟಾಚಾರಗಳಿಗೆ ಇಳಿದೆ ಸಿಎಗಳ ಮೇಲೆ ವಿಚಾರಣೆ ಸಂದರ್ಭದಲ್ಲಿ 25 ಜನರನ್ನು ತಪ್ಪಿತಸ್ಥರು ಎಂದು ಗುರುತಿಸಲಾಗಿದೆ. ಇಷ್ಟೇ ಜನರಾ, ಅಥವಾ ಇನ್ನೂ ಹೆಚ್ಚು ಜನರು ಅಕ್ರಮಗಳಿಗೆ ಕೈಜೋಡಿಸಿದ್ದರಾ ಎಂಬ ಅನುಮಾನ ಮೂಡುತ್ತದೆ ಎಂದು ಹೇಳಿದರು.