ನೋಟು ರದ್ದು: ನಕ್ಸಲರ ಪರದಾಟ

ಲತೆಹಾರ್: ಕೇಂದ್ರ ಸರ್ಕಾರ ನೋಟು ರದ್ದುಗೊಳಿಸಿ ಐತಿಹಾಸಿಕ ತೀರ್ಮಾನ ಕೈಗೊಂಡ ನಂತರ ಮಾವೋವಾದಿಗಳು ಸೇರಿದಂತೆ ಇತರ ನಕ್ಸಲರ ಗುಂಪುಗಳಿಗೆ ದಿಕ್ಕುತೋಚದಂತಾಗಿವೆ. ಅಲ್ಲಿ ಇಲ್ಲಿ ಬಲವಂತವಾಗಿ ಹಣ ಸಂಗ್ರಹಿಸಿ ಕೂಡಿಟ್ಟ 500, 1000 ನೋಟುಗಳನ್ನು ಬದಲಾಯಿಸಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಬುಡಕಟ್ಟು ಜನರ ಮೂಲಕ ನೋಟು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಕೆಲ ಬುಡಕಟ್ಟು ಜನರು ಸಿಕ್ಕಿ ಬಿದ್ದಿದ್ದಾರೆ ಎಂದು ಜಾರ್ಖಂಡ್ ನ ಲತೆಹಾರ್ ಎಸ್ಪಿ ಅನೂಪ್ ಬಿರ್ತೆ ಬುಧವಾರ ಹೇಳಿದ್ದಾರೆ.

ಜಾರ್ಖಂಡ್ ನಲ್ಲಿ ನಕ್ಸಲ್ ಪ್ರಭಾವವಿರುವ ಲತೆಹಾರ್ ಸುತ್ತಮುತ್ತ ಜಿಲ್ಲೆಗಳಲ್ಲಿ ನಕ್ಸಲರ ನೋಟು ಬದಲಾವಣೆ ಕಡೆ ನಿಗಾವಹಿಸಿರುವುದಾಗಿ ಹೇಳಿದ್ದಾರೆ.

ನೋಟಿನ ಮೌಲ್ಯವೂ ತಿಳಿಯದ ಬುಡಕಟ್ಟು ಮಹಿಳೆಯೊಬ್ಬಳು ಎರಡು ದಿನಗಳ ಹಿಂದೆ ತನ್ನ ಖಾತೆಗೆ 4.5 ಲಕ್ಷ ಹಣ ಜಮೆ ಮಾಡಲು ಬಂದಿದ್ದಳು, ಅಧಿಕಾರಿಗಳು ಪಾನ್ ಕಾರ್ಡ್ ಕೇಳಿದಾಗ ಗಾಭರಿಗೊಂಡ ಆಕೆ ಅಲ್ಲಿಂದ ವಾಪಸ್ ಹೊರಟು ಹೋದಳು ಎಂದು ಅಧಿಕಾರಿ ಹೇಳಿದ್ದಾರೆ. ಅಸ್ಸಾಂ ನಲ್ಲಿನ ನಕ್ಸಲರ ಗುಂಪೂ ಸಹ ನೋಟು ಬದಲಾಯಿಸಲು ವಿಫಲ ಯತ್ನ ನಡೆಸಿದ್ದು, ಈ ವೇಳೆ ಭಾರಿ ಮೊತ್ತದ ಹಣ ಹೊಂದಿದ್ದ ಇಬ್ಬರನ್ನು ಬಂಧಿಸಿದ್ದಾಗಿ ಹೇಳಿದರು.