ತಿಂಗಳಿಗೆ ಒಂದು ಕೋಟಿ ಲಂಚದ ಟಾರ್ಗೆಟ್, ನನ್ನ ಕೈಲಾಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿ ಅಳಲು

ನೆಲ್ಲೂರು (ಆಂಧ್ರ ಪ್ರದೇಶ): ಲಂಚ ಕೇಳಿದರು ಅಂತ ಪೊಲೀಸರ ಮೇಲೆ ದೂರುವುದನ್ನು ಕೇಳಿದ್ದೇವೆ. ಆದರೆ ಪೊಲೀಸರು ಪಡೆಯುವ ಲಂಚದಲ್ಲಿ ಹಿರಿಯ ಅಧಿಕಾರಿಗಳಿಗೆ ಪಾಲಿರುತ್ತದೆಯೇ? ಇಷ್ಟವಿಲ್ಲದಿದ್ದರೂ ಕಿರಿಯ ಅಧಿಕಾರಿಗಳು ಜನಸಾಮಾನ್ಯರನ್ನು ಪೀಡಿಸಿ ವಸೂಲಿ ಮಾಡಿ ಹಿರಿಯ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ನೀಡಬೇಕೆ?… ಇವೆಲ್ಲವೂ ನಮಗೆ ತಿಳಿದಿರುವುದಿಲ್ಲ… ಇಲ್ಲೊಬ್ಬರು ಸಬ್ ಇನ್ಸ್ ಪೆಕ್ಟರ್ ತಿಂಗಳಿಗೆ ಒಂದು ಕೋಟಿ ರೂಪಾಯಿ ಲಂಚ ವಸೂಲಿ ಮಾಡುವಂತೆ ಹಿರಿಯ ಅಧಿಕಾರಿಗಳು ಟಾರ್ಗೆಟ್ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.

ಕೊಟ್ಟ ಟಾರ್ಗೆಟ್ ನಂತೆ ಆ ಕೋಟಿ ರೂಪಾಯಿ ಹೊಂದಿಸಲು ಠಾಣೆಗೆ ಬರುವವರನ್ನು ಲಂಚಕ್ಕಾಗಿ ಪೀಡಿಸಬೇಕು. ಮರಳನ್ನು ಕೂಡಾ ನಾವೇ ಅಕ್ರಮವಾಗಿ ಬೇರೆ ರಾಜ್ಯಗಳಿಗೆ ಸಾಗಿಸಿ ಬಂದ ಹಣವನ್ನು ಆಡಳಿತ ಪಕ್ಷಗಳ ನಾಯಕರೂ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೀಡಬೇಕು. ಹೀಗೆ ಪ್ರತಿ ತಿಂಗಳು ಕೋಟಿ ರೂಪಾಯಿ ವಸೂಲಿ ಮಾಡುವುದು ನನ್ನ ಕೈಯಲ್ಲಿ ಆಗುತ್ತಿಲ್ಲ, ನೀವಾದರೂ ಕ್ರಮ ಕೈಗೊಳ್ಳಿ ಎಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸೂಳ್ಳೂರಪೇಟೆಯಲ್ಲಿ ಎಸ್.ಐ ಆಗಿ ಕೆಲಸ ಮಾಡುತ್ತಿರುವ ಜಗನ್ ಮೋಹನ್ ರಾವ್ ಎಂಬುವವರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.

ಎಸ್ಐ ದೂರಿನ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ನಾಯಕರು, ಹಿರಿಯ ಅಧಿಕಾರಿಗಳು ಎಲ್ಲಿ ತಮ್ಮ ಬಣ್ಣ ಬಯಲಾಗುವುದೋ ಎಂದು ದಿಗಿಲುಗೊಂಡಿದ್ದಾರೆ. ಆದರೆ ದೂರಿನ ಕುರಿತು ವಿಚಾರನೆ ನಡೆಸಬೇಕಿದ್ದ ಜಿಲ್ಲಾಧಿಕಾರಿ, ಈ ವಿಷಯವನ್ನು ಜಿಲ್ಲೆಯ ಎಸ್ಪಿಯವರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ದೂರು ನೀಡಿದ ಎಸ್ಐ ಜಗನ್ಮೋಹನ್ ರಾವ್ ರವರನ್ನು ವರ್ಗಾವಣೆ ಮಾಡಿ, ಎಲ್ಲಿಯೂ ಪೋಸ್ಟಿಂಗ್ ನೀಡದೆ ವಿ.ಆರ್. ನಲ್ಲಿಟ್ಟಿದ್ದಾರೆ. ಇದು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.