ಪತಂಜಲಿಯ 6 ಉತ್ಪನ್ನಗಳನ್ನು ಹಿಂಪಡೆಯುವಂತೆ ಸೂಚಿಸಿದ ನೇಪಾಳ

ಕಳಪೆ ಗುಣಮಟ್ಟದ ಕಾರಣ ನೀಡಿ 6 ವೈದ್ಯಕೀಯ ಉತ್ಪನ್ನಗಳನ್ನು ಹಿಂಪಡೆಯುವಂತೆ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದಕ್ಕೆ ನೇಪಾಳ ಸರ್ಕಾರ ನೋಟೀಸ್ ನೀಡಿದೆ. ಪತಂಜಲಿಯ 7 ಉತ್ಪನ್ನಗಳ ಪೈಕಿ 6 ಉತ್ಪನ್ನಗಳು ಸೂಕ್ಷ್ಮಾಣುಗಳನ್ನು ಪತ್ತೆ ಹಚ್ಚುವ ಮೈಕ್ರೋಬಯಲ್ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ನೋಟೀಸಿನಲ್ಲಿ ಹೇಳಲಾಗಿದೆ.

ಆಮ್ಲ ಚೂರ್ಣ, ದಿವ್ಯ ಗಶರ್ ಚೂರ್ಣ, ಬಹುಚಿ ಚೂರ್ಣ, ಅಶ್ವಗಂಧ ಮತ್ತು ಅದ್ವಿಯ ಚೂರ್ಣಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ಉತ್ಪನ್ನಗಳು.

ಭಾರತದಲ್ಲಿ ವಿದೇಶಿ ಕಂಪನಿಗಳ ಉತ್ಪನ್ನಗಳಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪತಂಜಲಿ ಸಂಸ್ಥೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತನ್ನ ಉತ್ಪನ್ನಗಳಿಂದ ಬರುವ ಆದಾಯವನ್ನು ದ್ವಿಗುಣಗೊಳಿಸಿಕೊಂಡಿದೆ. ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದ್ದರೂ, ಪತಂಜಲಿಯ ಕೆಲವು ಉತ್ಪನ್ನಗಳು ಆಹಾರ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿದ ಮತ್ತು ದಾರಿ ತಪ್ಪಿಸುವ ಜಾಹೀರಾತುಗಳ ಆರೋಪಗಳನ್ನು ಎದುರಿಸುತ್ತಿದೆ.