ಹೊಸ ಸಚಿವರು ಇವರೇ, ಇಂದು 10:30ಕ್ಕೆ ಪ್ರಮಾಣವಚನ ಸ್ವೀಕಾರ |News Mirchi
ಅನಂತ್ ಕುಮಾರ್ ಹೆಗಡೆ

ಹೊಸ ಸಚಿವರು ಇವರೇ, ಇಂದು 10:30ಕ್ಕೆ ಪ್ರಮಾಣವಚನ ಸ್ವೀಕಾರ

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಂಬತ್ತು ಜನ ಹೊಸಬರಿಗೆ ಅವಕಾಶ ಸಿಕ್ಕಿದ್ದು, ಇಂದು ಬೆಳಗ್ಗೆ 10:30 ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಹೊಸದಾಗಿ ಸಂಪುಟ ಸೇರ್ಪೆಯಾಗುತ್ತಿರುವವರ ಕುರಿತು ಒಂದಷ್ಟು ವಿವರಗಳು…

ಅನಂತ್ ಕುಮಾರ್ ಹೆಗಡೆ
ಕರ್ನಾಟಕದಿಂದ ಉತ್ತರಕನ್ನಡ ಕ್ಷೇತ್ರದಿಂದ ಐದನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ವಿದೇಶಾಂಗ ವ್ಯವಹಾರಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸತ್ತಿನ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಸಹಾಯ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಶಿವ ಪ್ರತಾಪ್ ಶುಕ್ಲಾ
ಉತ್ತರ ಪ್ರದೇಶದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಶಿವ ಪ್ರತಾಪ್ ಶುಕ್ಲಾ, ಹಿಂದೆ ಉತ್ತರಪ್ರದೇಶದಲ್ಲಿ 8 ವರ್ಷ ಸಚಿವರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಬಂಧೀಖಾನೆ ಇಲಾಖೆಗಳಲ್ಲಿ ಸುಧಾರಣೆಗಳನ್ನು ಉತ್ತಮ ಹೆಸರು ಗಳಿಸಿದ್ದಾರೆ. ಸದ್ಯ ಗ್ರಾಮೀಣಾಭಿವೃದ್ಧಿ ಕುರಿತು ರಚಿಸಲಾದ ಸಂಸತ್ತಿನ ಸ್ಥಾಯಿ ಸಮಿತಿ ಸದಸ್ಯರಾಗಿದ್ದಾರೆ.

ಸತ್ಯಪಾಲ್ ಸಿಂಗ್
ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಸಿಂಗ್, ಸದ್ಯ ಉತ್ತರ ಪ್ರದೇಶದ ಬಾಗ್ಪತ್ ನಿಂದ ಸಂಸದರಾಗಿದ್ದಾರೆ. ಗೃಹ ವ್ಯವಹಾರಗಳು ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿ, ಲಾಭಧಾಯ ಹುದ್ದೆಗಳ ಜಂಟಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ನಕ್ಸಲರ ನಿಯಂತ್ರಣಕ್ಕೆ ಮಾಡಿದ ಕೆಲಸಕ್ಕೆ 1990 ರಲ್ಲಿ ವಿಶೇಷ ಸೇವಾ ಪದಕವನ್ನು ಪಡೆದಿದ್ದಾರೆ. 1990 ರಲ್ಲಿ ಮುಂಬೈನಲ್ಲಿ ಸಂಘಟಿತ ಅಪರಾಧ ವ್ಯವಸ್ಥೆಯ ಬೆನ್ನು ಮುರಿದರು. ಮುಂಬೈ, ಪುಣೆ ನಗರಗಳ ಪೊಲೀಸ್ ಆಯುಕ್ತರಾಗಿಯೂ ಕೆಲಸ ಮಾಡಿದ್ದರು.

ಅಶ್ವಿನಿ ಕುಮಾರ್ ಚೌಬೇ
ಬಿಹಾರದ ಬಕ್ಸಾರ್ ಕ್ಷೇತ್ರದಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಾರೆ. ಹಿಂದೆ ಬಿಹಾರ ಅಸೆಂಬ್ಲಿಗೆ ಸತತ ಐದು ಬಾರಿ ಚುನಾಯಿತರಾಗಿದ್ದರು. 1974-75ರಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದ ಬಿಹಾರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ನಗರಾಭಿವೃದ್ಧಿ ಮತ್ತು ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ.

ರಾಜ್ ಕುಮಾರ್ ಸಿಂಗ್
ಮಾಜಿ ಐಎಎಸ್ ಅಧಿಕಾರಿ ರಾಜ್ ಕುಮಾರ್ ಅವರು ಬಿಹಾರದ ಆರಾ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಅವರು ಆರೋಗ್ಯ, ಕುಟುಂಬ ಕಲ್ಯಾಣ, ಸಿಬ್ಬಂದಿ, ಪಿಂಚಣಿ ಮತ್ತು ಸಾರ್ವಜನಿಕ ದೂರುಗಳಿಗೆ ಸಂಬಂಧಿಸಿದ ವಿವಿಧ ಸಂಸದೀಯ ಸ್ಥಾಯಿ ಸಮಿತಿಗಳ ಸದಸ್ಯರಾಗಿದ್ದಾರೆ. ಹಿಂದೆ ಅವರು ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ವೀರೇಂದ್ರ ಕುಮಾರ್
ಮಧ್ಯಪ್ರದೇಶದ ಟಿಕಂಗಢ ಸಂಸದ ವೀರೇಂದ್ರ ಅವರು ಸದ್ಯ ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ಸಂಸತ್ತಿನ ಸ್ಥಾಯಿ ಸಮಿತಿ ಸದಸ್ಯರಾಗಿರುವರು. ಇಲ್ಲಿಯವರೆಗೆ ಲೋಕಸಭೆಗೆ ಆರು ಬಾರಿ ಚುನಾಯಿತರಾಗಿದ್ದಾರೆ.

ಹರ್ದೀಪ್ ಸಿಂಗ್ ಪುರಿ
ಪಂಜಾಬಿನ ಮಾಜಿ ಐಎಫ್ಎಸ್ ಅಧಿಕಾರಿ ಹರ್ದೀಪ್ ಸಿಂಗ್ ಅವರು ವಿದೇಶ ವ್ಯವಹಾರಗಳಲ್ಲಿ ಉತ್ತಮ ಅನುಭವವಿದೆ. ಅವರು ಪ್ರಸ್ತುತ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಂಬಂಧಿಸಿದ ಬೌದ್ಧಿಕ ಸಂಘಟನೆ RIS ನ ಅಧ್ಯಕ್ಷರಾಗಿದ್ದಾರೆ. ಹಿಂದೆ ನ್ಯೂಯಾರ್ಕ್ ನಲ್ಲಿನ ಅಂತರರಾಷ್ಟ್ರೀಯ ಶಾಂತಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಗಜೆಂದ್ರ ಸಿಂಗ್ ಶೇಕಾವತ್
ಅವರು ಪ್ರಸ್ತುತ ರಾಜಸ್ಥಾನದ ಜೋಧಪುರದ ಸಂಸತ್ ಸದಸ್ಯರಾಗಿದ್ದಾರೆ. ಅವರು ಆರ್ಥಿಕ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಫೆಲೋಷಿಪ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಯುವಜನತೆಗೆ ಸಂಪರ್ಕದಲ್ಲರುತ್ತಾರೆ. ಬ್ಯಾಸ್ಕೆಟ್ ಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಆಡಿದ್ದಾರೆ. ಈಗ ಭಾರತೀಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.

ಆಲ್ಫೋನ್ಸ್ ಕಣ್ಣಾಂಥನಂ
ಕೇರಳದ ಆಲ್ಫೋನ್ಸ್ ಮಾಜಿ ಐಎಎಸ್ ಅಧಿಕಾರಿ. ದೆಹಲಿ ಅಭಿವೃದ್ಧಿ ಸಂಸ್ಥೆಯ ಕಮೀಷನರ್ ಆಗಿ ಕೆಲಸ ಮಾಡಿದ್ದ ಸಂದರ್ಭದಲ್ಲಿ 15 ಸಾವಿರ ಅಕ್ರಮ ನಿರ್ಮಾಣಗಳನ್ನು ನೆಲಸಮ ಮಾಡಿ ಹೆಸರು ಗಳಿಸಿದ್ದರು. ಈ ಮೂಲಕ 1994 ರಲ್ಲಿ ಟೈಮ್ಸ್ ಮ್ಯಾಗಜೀನ್ ಪ್ರಕಟಿಸಿದ ವಿಶ್ವದ 100 ಯುವ ನಾಯಕರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದರು.

Loading...
loading...
error: Content is protected !!