ಭಾರತದ ಮೊದಲ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆ – News Mirchi

ಭಾರತದ ಮೊದಲ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆ

ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಂಪುಟದಲ್ಲಿ ಹಿರಿಯರಾದ ನಿತಿನ್ ಗಡ್ಕರಿ ಅಥವಾ ಅರುಣ್ ಜೇಟ್ಲಿಯವರಿಗೆ ಸಿಗುತ್ತದೆ ನಿರೀಕ್ಷಿಸಲಾಗಿದ್ದ ಅತ್ಯಂತ ಮಹತ್ವದ ರಕ್ಷಣಾ ಖಾತೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿ ಬಿಜೆಪಿ ಮತ್ತೊಮ್ಮೆ ಯಾರೂ ಊಹಿಸದ ತೀರ್ಮಾನ ಕೈಗೊಂಡಿದೆ. ಅತ್ತ ಚೀನಾ, ಇತ್ತ ಪಾಕಿಸ್ತಾನಗಳು ಈ ಹಿಂದಿಗಿಂತ ಹೆಚ್ಚಾಗಿ ಪ್ರಚೋದಿಸುವ ವರ್ತನೆಯನ್ನು ತೋರುತ್ತಿರುವ ಸಮಯದಲ್ಲಿ ರಾಷ್ಟ್ರದ ಭದ್ರತೆಯ ಹೊಣೆಯನ್ನು ಒಬ್ಬ ಮಹಿಳೆಗೆ ನೀಡಿರುವುದು ವಿಶೇಷ.

ಇಂದಿರಾಗಾಂಧಿ ನಂತರ ರಕ್ಷಣಾ ಖಾತೆಯನ್ನು ನಿಭಾಯಿಸುತ್ತಿರುವ ಎರಡನೇ ಮಹಿಳೆ ಎನ್ನುವುದಕ್ಕಿಂತ ಭಾರತದ ರಕ್ಷಣಾ ಖಾತೆಗೆ ಮೊಟ್ಟ ಮೊದಲ ಪೂರ್ಣ ಪ್ರಮಾಣದ ಮಹಿಳಾ ಸಚಿವರು ನಿರ್ಮಲಾ ಸೀತಾರಾಮನ್ ಎಂದು ಕರೆಯುವುದು ಸೂಕ್ತ. ಇಂದಿರಾ ಗಾಂಧಿ ರಕ್ಷಣಾ ಸಚಿವೆಯಾಗಿದ್ದಾಗ(1975, 1980-82) ಹೆಚ್ಚುವರಿ ಜವಾಬ್ದಾರಿಯನ್ನಾಗಿ ನಿಭಾಯಿಸಿದರೇ ಹೊರತು ಪೂರ್ಣ ಪ್ರಮಾಣದ ಹೊಣೆ ಹೊರಲಿಲ್ಲ. ಆ ದಿನಗಳಲ್ಲಿ ಇಂದಿರಾಗಾಂಧಿ ರಕ್ಷಣಾ ಖಾತೆಯನ್ನೇಕೆ ವಹಿಸಿಕೊಂಡರು ಎಂಬ ವಿಷಯದಲ್ಲಿ ವಿವಿಧ ರೀತಿಯ ವಾದಗಳು ಕೇಳಿ ಬರುತ್ತವೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ದಿನವೇ (ಮೇ 26, 2014) ಅರುಣ್ ಜೇಟ್ಲಿಯವರು ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಿ ಪಡೆದಿದ್ದರು. ಆರು ತಿಂಗಳ ನಂತರ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ರವರನ್ನು ಕೇಂದ್ರ ಕ್ಯಾಬಿನೆಟ್ ಗೆ ಸೇರ್ಪಡೆ ಮಾಡಿಕೊಂಡು ರಕ್ಷಣಾ ಖಾತೆಯನ್ನು ನೀಡಿದ್ದರು. 2017 ಮಾರ್ಚ್ ನಲ್ಲಿ ಪರಿಕ್ಕರ್ ಮತ್ತೆ ಗೋವಾ ಮುಖ್ಯಮಂತ್ರಿಯಾಗಿ ವಾಪಸಾದ ನಂತರ, ಖಾಲಿ ಬಿದ್ದ ಈ ಖಾತೆಯನ್ನು ಮತ್ತೆ ಜೇಟ್ಲಿಯವರಿಗೆ ಹೆಚ್ಚುವರಿಯಾಗಿ ನೀಡಲಾಯಿತು. ಇಂದು ಸಚಿವ ಸಂಪುಟ ವಿಸ್ತರಣೆಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಪೂರ್ಣ ಪ್ರಮಾಣದ ರಕ್ಷಣಾ ಖಾತೆ ಹೊಣೆ ನೀಡಲಾಗಿದೆ.

Loading...