ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಒಗ್ಗಟ್ಟಿಗೆ ನಿತೀಶ್ ಹೊಡೆತ

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಗ್ಗಟ್ಟಿಗೆ ಬಲವಾದ ಹೊಡೆತ ಬಿದ್ದಿದೆ. ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆ ಬೆಂಬಲ ನೀಡುತ್ತಿರುವುದಾಗಿ ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಬುಧವಾರ ಪ್ರಕಟಿಸಿದ್ದಾರೆ. ಪ್ರತಿಪಕ್ಷ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಗುರುವಾರ ಕರೆದಿರುವ ಪ್ರತಿಪಕ್ಷಗಳ ಸಭೆಗೆ ತಾವು ಹಾಜರಾಗುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಮಾತ್ರ ಬಿಜೆಪಿಗೆ ತಾವು ಬೆಂಬಲ ನೀಡಲು ತೀರ್ಮಾನಿಸಿದ್ದು, ಉಳಿದ ವಿಷಯಗಳಲ್ಲಿ ಪ್ರತಿಪಕ್ಷಗಳ ಐಕ್ಯತೆಗೆ ಧಕ್ಕೆ ಇಲ್ಲ, ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾದ್ ಕೋವಿಂದ್ ಆಯ್ಕೆ ಉತ್ತಮವಾಗಿದ್ದು, ಬೆಂಬಲಿಸಬೇಕು ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ತೀರ್ಮಾನಕ್ಕೆ ಸಭೆಯಲ್ಲಿ ಪಾಲ್ಗೊಂಡ 60 ಶಾಸಕರು ಬೆಂಬಲಿಸಿದರು ಎನ್ನಲಾಗಿದೆ. ಒಂದು ವೇಳೆ ಕೋವಿಂದ್ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೆಂಬಲಿಸುವುದಿಲ್ಲ ಎಂದು ನಿತೀಶ್ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಜಂಟಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲು ಪ್ರತಿಪಕ್ಷಗಳು ಗುರುವಾರ ಸಭೆ ಸೇರಲಿರುವ ಹಿನ್ನೆಲೆಯಲ್ಲಿ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದರು. ಹೀಗಾಗಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್ ರವರನ್ನೇ ಆಯ್ಕೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಕೋವಿಂದ್ ಜೆಡಿಯು ಬೆಂಬಲ ಪ್ರಕಟಿಸಿರುವುದರಿಂದ ಪ್ರತಿಪಕ್ಷಗಳ ಒಗ್ಗಟ್ಟನ್ನು ಕಾಪಾಡಲು ಇತರೆ ಪ್ರತಿಪಕ್ಷ ನಾಯಕರು ಚರ್ಚೆ ನಡೆಸಿದ್ದರಾರೆ. ಉಳಿದ ಪ್ರತಿಪಕ್ಷಗಳ ತೀರ್ಮಾನವೇ ತಮ್ಮ ತೀರ್ಮಾನ ಎಂದು ಈಗಾಗಲೇ ಆರ್.ಜೆ.ಡಿ ಮುಖ್ಯಸ್ಥ ಲಾಲೂ ಹೇಳಿದ್ದಾರೆ.

ಮತ್ತೊಂದು ಕಡೆ ರಾಮನಾಥ್ ಕೋವಿಂದ್ ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿಯವರನ್ನು ಭೇಟಿ ಮಾಡಿದರು. ಕೋವಿಂದ್ ಆಯ್ಕೆಗೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆ ಬಣ ಬೆಂಬಲ ವ್ಯಕ್ತಪಡಿಸಿದೆ.