ನಿಗದಿಯೇ ಆಗದ ಮೋದಿ ಜಿನ್’ಪಿಂಗ್ ಭೇಟಿ ರದ್ದಾಗುವುದಾದರೂ ಹೇಗೆ?

ಜುಲೈ 7 ಮತ್ತು 8 ರಂದು ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ದೇಶದ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಚರ್ಚೆಗಳು ನಡೆಸುತ್ತಾರೆ. ಸಿಕ್ಕಿಂ ಗಡಿಯಲ್ಲಿ ನೆಲೆಸಿರುವ ಇತ್ತೀಚಿನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್ ಪಿಂಗ್ ನಡುವಿನ ದ್ವಿಪಕ್ಷೀಯ ಚರ್ಚೆಯನ್ನು ಚೀನಾ ರದ್ದು ಮಾಡುತ್ತದೆ ಎಂದು ಕೆಲ ದಿನಗಳಿಂದ ಸುದ್ದಿಗಳು ಬರುತ್ತಿವೆ. ಆದರೆ ಈ ಸುದ್ದಿಗಳಲ್ಲಿ ಯಾವುದೇ ಸತ್ಯವಿಲ್ಲ. ಮೋದಿಯವರ ಪೂರ್ವ ನಿಗದಿತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಜಿನ್ ಪಿಂಗ್ ರವರೊಂದಿಗೆ ಚರ್ಚೆಯ ವಿಷಯವೇ ಇಲ್ಲ, ಇದು ಚೀನಾ ಮಾಧ್ಯಮಗಳ ಸೃಷ್ಟಿ ಎಂದು ಭಾರತೀಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಿಕ್ಕಿ ಸೆಕ್ಟಾರ್ ನಲ್ಲಿ ರಸ್ತೆ ನಿರ್ಮಾಣ ವಿಷಯದಲ್ಲಿ ಭಾರತೀಯ ಸೈನಿಕರ ಘರ್ಷಣೆ ಮೊದಲಾದ ದಿನದಿಂದ ಚೀನಾ ಕುತಂತ್ರಗಳಿಗೆ ಮುಂದಾಗಿದೆ. ಈ ಚರ್ಚೆ ರದ್ದು ಎಂಬ ಸುದ್ದಿಗಳೂ ಕೂಡಾ ಅದರ ಸೃಷ್ಟಿ ಎಂದು ತಜ್ಞರು ಹೇಳುತ್ತಿದ್ದಾರೆ. ಸಿಕ್ಕಿಂ ಸೆಕ್ಟಾರ್ ನ ಡೋಕ್ಲಾ ಪ್ರದೇಶದಿಂದ ಭಾರತೀಯ ಪಡೆಗಳು ಹಿಂದಿರುಗಬೇಕು, ಇಲ್ಲವೆಂದರೆ ಸಿಕ್ಕಿಂ ಮೇಲೆ ಚೀನಾ ನಿಲುವು ಬದಲಾಗುತ್ತದೆ ಎಂದು ಎಚ್ಚರಿಸಿ ಚೀನಾ ಮಾಧ್ಯಮಗಳು ಬರೆಯುತ್ತಿವೆ. ಅಂತಹ ಸುದ್ದಿಗಳಂತೆಯೇ ಇದೂ ಒಂದು ಸೃಷ್ಟಿ.

ಈ ವಿಷಯದ ಕುರಿತು ಭಾರತೀಯ ಅಧಿಕಾರಿಗಳು ಸ್ಪಷ್ಟಣೆ ನೀಡಿದ್ದಾರೆ. ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ಮೋದಿ, ಅರ್ಜೆಂಟಿನಾ, ಕೆನಡಾ, ಇಟಲಿ, ಜಪಾನ್, ಮೆಕ್ಸಿಕೋ, ಯುಕೆ, ಆರ್ವೋಕೆ, ವಿಯೆಟ್ನಾಂ ದೇಶದ ನಾಯಕರೊಂದಿಗೆ ಮಾತ್ರ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸುತ್ತಾರೆ ಎಂದು ಹೇಳಿದ್ದಾರೆ.

ಮೋದಿ ಪೂರ್ವ ನಿಗದಿತ ಕಾರ್ಯಕ್ರಮ ಪಟ್ಟಿಯಲ್ಲಿ ಚೀನಾ ಅಧ್ಯಕ್ಷರೊಂದಿಗೆ ಚರ್ಚೆಯ ವಿಷಯವೇ ಇಲ್ಲದಿದ್ದಾಗ, ಅದು ಹೇಗೆ ಚರ್ಚೆ ರದ್ದು ಎನ್ನುವುದು ಅರ್ಥವಾಗುತ್ತಿಲ್ಲ. ಬೀಜಿಂಗ್ ಕೇಂದ್ರಿತವಾಗಿ ಇಂತಹ ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ರಿಕ್ಸ್ ದೇಶದ ನಾಯಕರೊಂದಿಗೆ ಮೋದಿ ಭೇಟಿ ಇರುತ್ತದೆ, ಈ ಸಂದರ್ಭದಲ್ಲಿ ಮೋದಿ, ಜಿನ್ ಪಿಂಗ್ ಒಂದೇ ವೇದಿಕೆ ಮೇಲೆ ಬರುವ ಸಾಧ್ಯತೆ ಇರುತ್ತದೆ ಅಷ್ಟೇ, ಪ್ರತ್ಯೇಕ ಭೇಟಿ, ಚರ್ಚೆ ಇರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.