ನೋಟು ರದ್ದು: ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ ವಿಚಾರಣೆ

ನವದೆಹಲಿ: ನೋಟು ರದ್ದಾದ ನಂತರದ ಪರಿಣಾಮಗಳ ಬಗ್ಗೆ ಈ ಹಿಂದೆ ಅಸಂತೃಪ್ತಿ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಈ ವಿಷಯಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಒಂದೇ ಕಡೆ ವಿಚಾರಣೆ ನಡೆಸುತ್ತಿದೆ.

ಈಗಾಗಲೇ ಸುಪ್ರೀಂ ಕೊರ್ಟ್‌ನಲ್ಲಿ ವಾದಗಳು ಆರಂಭವಾಗಿವೆ. ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೇಂದ್ರ ಸರ್ಕಾರದ ಪರ ವಾದ ಮಾಡುತ್ತಾ, ನೋಟು ರದ್ದಾದ ನಂತರ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ಏನೆಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು. ನೋಟು ಕೊರತೆ ಉಂಟಾಗಿದೆ ಎಂಬ ಸುದ್ದಿಗಳ ಕುರಿತೂ ವಿವರಿಸಿದರು.

ಸರ್ಕಾರ ನೋಟು ಕೊರತೆ ಎದುರಿಸುತ್ತಿದೆ ಎಂಬ ಸುದ್ದಿಗಳಲ್ಲಿ ಸತ್ಯವಿಲ್ಲ. ರಿಸರ್ವ್ ಬ್ಯಾಂಕ್, ಸರ್ಕಾರಿ ಮುದ್ರಣಾಲಯಗಳ ಮೂಲಕ ಅಗತ್ಯವಿದ್ದಷ್ಟು ನೋಟು ಮುದ್ರಿಸುತ್ತಿದ್ದಾರೆ. ಆದರೆ ಆ ನೋಟುಗಳನ್ನು ಬ್ಯಾಂಕುಗಳು ಮತ್ತು ಅಂಚೆ ಕಛೇರಿಗಳಿಗೆ ತಲುಪಿಸುವುದರಲ್ಲಿ ಸ್ವಲ್ಪ ತಡವಾಗಿದೆ, ಆದಷ್ಟು ಬೇಗ ಹೊಸ ನೋಟುಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ, ಈ ವಿಷಯದಲ್ಲಿ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಕುಲ್ ರೋಹಟಗಿ ಕೋರ್ಟ್ ಗೆ ವಿವರಿಸಿದರು.

ನೊಟು ರದ್ದುಗೊಂಡ ನಂತರ ನವೆಂಬರ್ 10 ರಿಂದ ಮಂಗಳವಾರ ರಾತ್ರಿಯವರೆಗೂ ರೂ. 6 ಲಕ್ಷ ಕೋಟಿ ಬ್ಯಾಂಕುಗಳಲ್ಲಿ ಜಮೆಯಾಗಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದು, ನೋಟು ಬದಲಾವಣೆ ಮೂಲಕ ರೂ. 15 ಲಕ್ಷ ಕೋಟಿ ಡಿಪಾಸ್ಟ್ ಆಗುತ್ತದೆ ಎಂದು ಸರ್ಕಾರ ಭಾವಿಸಿದೆ ಎಂದರು.