ಉತ್ತರ ಕೊರಿಯಾದಿಂದ ಮತ್ತೊಂದು ಪರಮಾಣು ಪರೀಕ್ಷೆ

ಎಷ್ಟು ಎಚ್ಚರಿಕೆಗಳು ಬಂದರೂ ಉತ್ತರ ಕೊರಿಯಾ ತನ್ನ ಹಠಮಾರಿ ಧೋರಣೆ ಮುಂದುವರೆಸಿದೆ. ಸರಣಿ ಕ್ಷಿಪಣಿಗಳ ಪ್ರಯೋಗದಿಂದ ಮತ್ತಷ್ಟು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಇದೀಗ ಭಾನುವಾರ ಬೆಳಗ್ಗೆ ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಿದೆ. ಈ ವಿಷಯವನ್ನು ಜಪಾನ್ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಿರುವುದು ಇದು ಆರನೇ ಬಾರಿ.

ಅಣು ಪರೀಕ್ಷೆಯಿಂದ ಉತ್ತರ ಕೊರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ಜಪಾನ್ ಹೇಳಿದೆ. ಇಷ್ಟು ತೀವ್ರತೆಯ ಭೂಕಂಪನವನ್ನು ನೋಡಿದರೆ, ಇದುವರೆಗೂ ಮಾಡಿರದ ಪ್ರಬಲ ಪರಮಾಣು ಪರೀಕ್ಷೆಯನ್ನು ಉತ್ತರ ಕೊರಿಯಾ ಮಾಡಿರಬಹುದು ಎಂದು ಜಪಾನ್ ಸರ್ಕಾರ ಹೇಳಿದೆ. 1945 ರಲ್ಲಿ ಜಪಾನಿನ ನಾಗಸಾಕಿ ಮೇಲೆ ನಡೆದ ಪರಮಾಣು ಬಾಂಬ್ ಸ್ಪೋಟಕ್ಕಿಂದ ನಾಲ್ಕರಿಂದ ಐದು ಪಟ್ಟು ಪ್ರಬಲವಾದ ಪರೀಕ್ಷೆ ಇದಾಗಿದೆ ಎನ್ನಲಾಗುತ್ತಿದೆ. ಈ ಪರೀಕ್ಷೆ ನಡೆಸಿದ್ದು ಮತ್ತು ಅದು ಯಶಸ್ವಿಯಾಗಿರುವುದಾಗಿ ಉತ್ತರ ಕೊರಿಯಾ ದೃಢಪಡಿಸಿದೆ.

ಉತ್ತರ ಕೊರಿಯಾ ನಾಯಕ “ಕಿಮ್ ಜಾಂಗ್ ಉನ್” ಹೈಡ್ರೋಜನ್ ಬಾಂಬ್ ಪಕ್ಕ ನಿಂತಿರುವ ಫೋಟೋ ಬಹಿರಂಗವಾದ ನಂತರ ಈ ಪರೀಕ್ಷೆ ನಡೆದಿರುವುದು ಗಮನಾರ್ಹ. ಕಳೆದ ಮಂಗಳವಾರ ಜಪಾನ್ ಗುರಿಯಾಗಿಸಿ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿತ್ತು. ಈ ಪರೀಕ್ಷೆಗೆ ದಕ್ಷಿಣ ಕೊರಿಯಾ ಮತ್ತು ಜಪಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗಳಿಂತ ಮತ್ತಷ್ಟು ಉದ್ವಿಘ್ನ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.