ಸಂಘದಲ್ಲೇ ಇರುತ್ತೇನೆ, ರಾಷ್ಟ್ರಪತಿ ಹುದ್ದೆ ಬೇಕಿಲ್ಲ

ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ತಾವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುಡಿ ಪಡ್ವಾ(ಮರಾಠಿಗರ ಹೊಸ ವರ್ಷ) ಪ್ರಯುಕ್ತ ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ತಾವು ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿ ಎಂಬಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಂತೆ ಎಂದಿಗೂ ನಡೆಯುವುದಿಲ್ಲ. ತಾವು ಆರ್.ಎಸ್.ಎಸ್ ನಲ್ಲೇ ಮುಂದುವರೆಯುವುದಾಗಿ, ಒಂದು ವೇಳೆ ತಮ್ಮ ಬಳಿ ರಾಷ್ಟ್ರಪತಿ ಹುದ್ದೆಯ ಪ್ರಸ್ತಾವನೆ ಬಂದರೂ ತಿರಸ್ಕರಿಸುವುದಾಗಿ ಹೇಳಿದ್ದಾರೆ.

ಮೋಹನ್ ಭಾಗವತ್ ಮುಂದಿನ ರಾಷ್ಟ್ರಪತಿ ಹುದ್ದೆಗೆ ಉತ್ತಮ ಆಯ್ಕೆ, ಕ್ಲೀನ್ ಇಮೇಜ್ ಇರುವಂತಹ ವ್ಯಕ್ತಿ ಆ ಸ್ಥಾನವನ್ನು ಅಲಂಕರಿಸಬೇಕು‌. ಮೋಹನ್ ಭಾಗವತ್ ಅವರ ಹೆಸರು ಚರ್ಚೆಯಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಭಾರತ ಹಿಂದೂ ರಾಷ್ಟ್ರವಾಗಬೇಕೆಂದರೆ ಭಾಗವತ್ ಅವರು ಉತ್ತಮ ಆಯ್ಕೆ ಎಂದು ಇತ್ತೀಚೆಗೆ ಶಿವಸೇನೆ ಹೇಳಿತ್ತು.

ಶಿವಸೇನೆಯ ಈ ಮಾತುಗಳು ಕಿವಿಗೆ ಬೀಳುತ್ತಿದ್ದ ಕೂಡಲೇ ಪ್ರತಿಕ್ರಿಯಿಸಿದ ಕಾಂಗ್ರೆಸ್, ಆರ್‌ಎಸ್‌‌ಎಸ್ ಸಿದ್ಧಾಂತದ ಮೋಹನ್ ಭಾಗವತ್ ಅವರ ಆಯ್ಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು.

ಬಯಸಿದ ವ್ಯಕ್ತಿಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲು ಬಿಜೆಪಿಗೆ ಕೊರತೆ ಇದ್ದ ಮತಗಳ ಅಂತರ, ಇತ್ತೀಚಿನ ಚುನಾವಣಾ ಗೆಲುವಿನಿಂದಾಗಿ ಕಡಿಮೆಯಾಗಿದೆ. ಬಿಜು ಜನತಾದಳ ಮತ್ತು ಎಐಎಡಿಎಂಕೆ ಬೆಂಬಲದಿಂದ ಅದನ್ನು ಸಾಧಿಸುವುದೂ ಬಿಜೆಪಿ ಗೆ ಕಷ್ಟವೇನಲ್ಲ.