ಏಟಿಎಂ ಗೆ ಪರ್ಯಾಯ ಪೇಟಿಎಂ

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರಿಂದ ಕಪ್ಪು ಹಣ, ನಕಲಿ ನೋಟುಗಳಿಗೆ ಬ್ರೇಕ್ ಹಾಕುವುದು ಹಾಗಿರಲಿ, ಡಿಜಿಟಲ್ ಪೇಮೆಂಟ್, ಆನ್ಲೈನ್ ಮೊಬೈಲ್ ವ್ಯಾಲೆಟ್ ಕಂಪನಿಗಳಿಗೆ ಅದೃಷ್ಟ ಅರಸಿ ಬಂದಿದೆ. ನರೇಂದ್ರ ಮೋದಿ ಬುಧವಾರ ಮಾಡಿದ ಪ್ರಕಟಣೆಯಿಂದಾಗಿ ಮೊಬೈಲ್ ವ್ಯಾಲೆಟ್ ಕಂಪನಿ ‘ಪೇಟಿಎಂ’ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿದೆ.

ಏಕಾಏಕಿ ಪೇಟಿಎಂ ಬಳಸಿ ಮಾಡುತ್ತಿರುವ ಪಾವತಿಗಳು ಶೇ. 435 ರಷ್ಟು ಹೆಚ್ಚಾಗಿವೆ. ಪೇಟಿಎಂ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಶೇ.200 ರಷ್ಟು ಹೆಚ್ಚಾಗಿದೆ. ಚಿಲ್ಲರೆ ಅಂಗಡಿ, ರೀಟೇಲ್ ಮಾಲ್ ಸೇರಿದಂತೆ ಪಾನ್ ಅಂಗಡಿಗಳಿಂದ ಹಿಡಿದು ಪೆಟ್ರೋಲ್ ಬಂಕ್ ಗಳವರೆಗೆ ಪಾವತಿ ಸೇವೆ ನೀಡುವ ಈ ಕಂಪನಿ, ದೇಶದಲ್ಲಿ 1200 ನಗರಗಳ ವ್ಯಾಪ್ತಿಯ 8,50,000 ಪ್ರದೇಶಗಳಿಂದ ಪೇಟಿಎಂ ಸೇವೆಗಳನ್ನು ಗ್ರಾಹಕರಿಗೆ ಸೇವೆ ನೀಡಬಲ್ಲದು. ಸ್ವಾತಂತ್ರ್ಯ ಭಾರತದಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೊಗಳಿ ಈ ಕಂಪನಿ ಹಲವು ಪತ್ರಿಕೆಗಳಲ್ಲಿ ಮೊದಲ ಪುಟದ ಜಾಹೀರಾತುಗಳನ್ನು ನೀಡಿದೆ.

ಮೋದಿಯವರ ತೀರ್ಮಾನ ಹೊರಬಿದ್ದ ಕ್ಷಣದಿಂದ ನಮ್ಮ ಗ್ರಾಹಕರು ನಿರೀಕ್ಷಿಸದಷ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದಾರೆ. ಈಗ ನಮ್ಮ ಕನಸು ನೆರವೇರುತ್ತಿದೆ ಎಂದು ಭಾವಿಸುತ್ತಿದ್ದೇವೆ. ದೇಶಾದ್ಯಂತ ಸೇವೆಗಳನ್ನು ವಿಸ್ತರಿಸಲು ನಾವು ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮ ಪಡಬೇಕಿದೆ ಎಂದು ಪೇಟಿಎಂ ವ್ಯವಸ್ಥಾಪಕ ವಿಜಯ್ ಶೇಖರ್ ಶರ್ಮ ಹೇಳಿದ್ದಾರೆ. ‘ಅಬ್ ಎಟಿಎಂ ನಹೀ ಪೇಟಿಎಂ ಕರೋ’ ಎಂದು ತಮ್ಮ ಗ್ರಾಹಕರಿಗೆ ಕರೆ ನೀಡಿದ್ದಾರೆ.

ಹಾಗೆಯೇ ಅನ್ಲೈನ್ ಪೇಮೆಂಟ್ ಆಪ್ ‘ಫ್ರೀಚಾರ್ಜ್ ವ್ಯಾಲೆಟ್’ ವ್ಯಾಪಾರ ದೇಶಾದ್ಯಂತ ಮೂರರಷ್ಟು ಹೆಚ್ಚಾಗಿದೆ. ಇತರೆ ಅನ್ಲೈನ್ ಪೇಮೆಂಟ್ ಆಪ್ ಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ಫ್ಲಿಪ್ ಕಾರ್ಟ್ ಮೊದಲಾದ ಅನ್ಲೈನ್ ಶಾಪಿಂಗ್ ತಾಣಗಳು ತಾತ್ಕಾಲಿಕವಾಗಿ ಕ್ಯಾಷ್ ಆನ್ ಡೆಲಿವರಿ ಸೇವೆ ಸ್ಥಗಿತಗೊಳಿಸಿದ್ದು, ಮೊಬೈಲ್ ವ್ಯಾಲೆಟ್ ಗಳಿಂದ ಪಾವತಿ ಮಾಡುವಂತೆ ಕೋರಿದೆ.