ಮತ್ತೆ 9 ಸ್ಮಾರ್ಟ್ ಫೋನ್ ಕಂಪನಿಗಳಿಗೆ ಕೇಂದ್ರದಿಂದ ನೋಟೀಸ್

ನವದೆಹಲಿ: ಗ್ರಾಹಕರ ಮಾಹಿತಿಗಳು ದುರುಪಯೋಗವಾಗದಂತೆ ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತೆ ಕೇಂದ್ರ ಸರ್ಕಾರ ಇನ್ನೂ 9 ಸ್ಮಾರ್ಟ್ ಫೋನ್ ಕಂಪನಿಗಳಿಗೆ ನೋಟೀಸ್ ಕಳುಹಿಸಿದೆ. ಮೊಟೊರೋಲಾ, ಆಸಸ್, ಹಾನರ್, ಒನ್ ಪ್ಲಸ್, ಕೂಲ್ ಪ್ಯಾಡ್, ಇನ್ ಫೋಕಸ್, ಬ್ಲೂ, ಒಪ್ಪೋ, ನುಬಿಯಾ ಸ್ಮಾರ್ಟ್ ಫೋನ್ ಕಂಪನಿಗಳು ಈಗ ಸರ್ಕಾರದಿಂದ ನೋಟೀಸ್ ಪಡೆದವು.

ನಾಲ್ಕು ದಿನಗಳ ಹಿಂದೆಯಷ್ಟೇ 21 ಸ್ಮಾರ್ಟ್ ಫೋನ್ ಕಂಪನಿಗಳಿಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೋಟೀಸ್ ಕಳುಹಿಸಿತ್ತು. ಸ್ಮಾರ್ಟ್ ಫೋನ್ ನಿರ್ಮಾಣದಲ್ಲಿ ಕಂಪನಿಗಳು ತೆಗೆದುಕೊಳ್ಳುತ್ತಿರುವ ಭದ್ರತಾ ಕ್ರಮಗಳ ಬಗ್ಗೆ ತಿಳಿಸಬೇಕೆಂದು ಸರ್ಕಾರ ಸೂಚಿಸಿತ್ತು. ಇದಕ್ಕಾಗಿ ಆಗಸ್ಟ್ 28 ರವರೆಗೆ ಸರ್ಕಾರ ಗಡುವು ವಿಧಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೊಬೈಲ್ ಫೋನ್ ಗಳಿಂದ ಮಾಹಿತಿ ಸೋರಿಕೆಯಾಗುತ್ತಿದೆಯೆಂದು ವಿಶ್ವ ಮಟ್ಟದಲ್ಲಿ ವರದಿಗಳು ಬರತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಸ್ಮಾರ್ಟ್ ಫೋನ್, ಅವುಗಳಲ್ಲಿ ಮೊದಲೇ ಲೋಡ್ ಮಾಡಲಾದ ಸಾಫ್ಟ್ ವೇರ್, ಆಪ್ಸ್ ಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ಭದ್ರತೆಗಳ ವಿಷಯದಲ್ಲಿ ಎಲೆಕ್ಟ್ರಾನಿಕ್ಸ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹೆಚ್ಚು ಗಮನ ಹರಿಸಿದೆ. ಸರ್ಕಾರದಿಂದ ನೋಟೀಸ್ ಪಡೆದವುಗಳಲ್ಲಿ ಹೆಚ್ಚಿನವು ಚೀನಾ ಕಂಪನಿಗಳು.

ಮತ್ತೊಂದೆಡೆ ಡೊಕ್ಲಾಂ ವಲಯದಲ್ಲಿ ಭಾರತ ಮತ್ತು ಚೀನಾಗಳ ನಡುವೆ ಉಂಟಾಗಿರುವ ಉದ್ವಿಘ್ನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಸರ್ಕಾರದ ಈ ಆದೇಶ ಮಹತ್ವ ಪಡೆದಿದೆ.