ಭಾರತ್ ಬಂದ್ ಎಂಬ ವಿಫಲ ಹೋರಾಟಕ್ಕೆ ಕಾರಣ? |News Mirchi

ಭಾರತ್ ಬಂದ್ ಎಂಬ ವಿಫಲ ಹೋರಾಟಕ್ಕೆ ಕಾರಣ?

ನೋಟು ರದ್ದು ವಿರೋಧಿಸಿ ಸೋಮವಾರ ಒಗ್ಗಟ್ಟಾಗಿ ಬಂದ್ ನಡೆಸಬೇಕಿದ್ದ ಪ್ರತಿಪಕ್ಷಗಳೆಲ್ಲಾ ಒಬ್ಬೊಬ್ಬರದ್ದು ಒಂದು ದಾರಿಯೆಂಬಂತೆ ವರ್ತಿಸಿದ್ದರಿಂದಾಗಿ ಎಡಪಕ್ಷಗಳ ಪ್ರಾಬಲ್ಯ ಹೆಚ್ಚಾಗಿರುವ ಕೇರಳ, ತ್ರಿಪುರ ರಾಜ್ಯಗಳು ಹೊರತುಪಡಿಸಿದರೆ, ದೇಶದಲ್ಲಿ ಎಲ್ಲೂ ಬಂದ್ ನ ಪ್ರಭಾವ ಅಷ್ಟಾಗಿ ಕಂಡುಬರಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಪ್ರಾಬಲ್ಯ ಹೆಚ್ಚಾಗಿದ್ದರೂ, ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ಅಸಹಕಾರದ ಕಾರಣ ಅದರ ಪ್ರಭಾವ ಇಲ್ಲದಂತಾಯಿತು. ಸರ್ಕಾರಿ, ಖಾಸಗಿ ಬಸ್ ಸೇವೆ, ರೈಲು ಸೇವೆಗಳು ಎಂದಿನಂತೆ ನಡೆದವು. ಎಡಪಕ್ಷಗಳು ಮತ್ತು ಮಮತಾ ಬ್ಯಾನರ್ಜಿ ಬೇರೆ ಬೇರೆಯಾಗಿ ಪ್ರತಿಭಟನೆ ನಡೆಸಿದರು. ದೇಶಾದ್ಯಂತ 12 ಗಂಟೆಗಳ ಕಾಲ ಎಡಪಕ್ಷಗಳು ಬಂದ್ ಗೆ ಕರೆ ನೀಡಿದ್ದರೆ, ಮೊದಲು ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಬಂದ್‌ನಿಂದ ಹಿಂಜರಿದಿದ್ದು, ಕೇವಲ ‘ಆಕ್ರೋಶ್ ದಿವಸ್’ ಗೆ ಸೀಮಿತವಾಯಿತು. ಟಿ ಆರ್ ಎಸ್, ಜೆಡಿಯು, ಜೆಡಿಎಸ್ ಸಂಪೂರ್ಣ ಬಂದ್ ನಿಂದಲೇ ದೂರವುಳಿದವು.

ಪ್ರತಿಪಕ್ಷಗಳು ಬಯಸುತ್ತಿರುವುದು ಭ್ರಷ್ಟಾಚಾರ ಬಂದ್ ಆಗುವುದನ್ನಾ ಅಥವಾ ಭಾರತ ಬಂದ್ ಮಾಡುವುದನ್ನಾ? ಎಂದು ಪ್ರಧಾನಿ ಮೋದಿ ಸೂಕ್ತ ಸಮಯದಲ್ಲಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ದೇಶದ ಪ್ರಜೆಗಳಲ್ಲಿ ಮೋದಿಯವರ ಪ್ರಭಾವವನ್ನು ಅಂದಾಜಿಸಿದ ಕಾಂಗ್ರೆಸ್ ಪಕ್ಷ, ಬಂದ್ ಮಾಡಲು ಹಿಂದೇಟು ಹಾಕಿತು.

ನೋಟು ರದ್ದು ವಿಷಯದಲ್ಲಿ ಪ್ರತಿಪಕ್ಷಗಳೆಲ್ಲಾ ಒಂದೇ ನಿರ್ಧಾರಕ್ಕೆ ಬಾರದಿರುವುದು ಪ್ರಧಾನಿಗೆ ಅನುಕೂಲವಾಯಿತು. ಸಂಸತ್ ಕಲಾಪಗಳನ್ನು ಸ್ಥಗಿತಗೊಳಿಸುವುದು ಬಿಟ್ಟರೆ ಪ್ರತಿಪಕ್ಷಗಳು ಬೇರೆ ಏನೂ ಮಾಡದಂತಾಗಿವೆ. ಕನಿಷ್ಠ ಸಂಸತ್ತಿನಲ್ಲಿ ಮೋದಿಯವರಿಂದ ಉತ್ತರ ಪಡೆಯಲು ವಿಫಲರಾದರು ಎಂದರೆ ಅದು ಪ್ರತಿಪಕ್ಷಗಳ ಬಲಹೀನತೆಯೇ ಸರಿ.

ನೋಟು ರದ್ದು ವಿಷಯದಲ್ಲಿ ಸರ್ಕಾರವನ್ನು ಏನು ಒತ್ತಾಯ ಮಾಡಬೇಕೆಂಬುದೇ ಪ್ರತಿಪಕ್ಷಗಳಿಗೆ ಸ್ಪಷ್ಟತೆಯಿಲ್ಲ. ನೋಟು ರದ್ದು ವಿಷಯ ಮೊದಲೇ ಲೀಕ್ ಆಗಿದೆ, ಈ ಕುರಿತು ತನಿಖೆ ನಡೆಸಬೇಕೆಂದು ಕೆಲ ಪಕ್ಷಗಳು ಒತ್ತಾಯಿಸಿದರೆ, ಪ್ರಧಾನಮಂತ್ರಿ ಕ್ಷಮೆ ಯಾಚಿಸಬೇಕು ಎಂದು ಕೆಲ ಪಕ್ಷಗಳು ಒತ್ತಾಯಿಸುತ್ತಿವೆ. ಆರಂಭದಲ್ಲಿ ನೋಟು ರದ್ದು ತೀರ್ಮಾನವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ ಪಕ್ಷಗಳು, ಕ್ರಮೇಣ ಈ ಅಂಶದ ಕುರಿತು ಮೌಮವಹಿಸಿ, ಜನರ ಕಷ್ಟ ನಿವಾರಿಸುವಂತೆ ಮಾತ್ರ ಒತ್ತಾಯಿಸುತ್ತಿವೆ.

Loading...
loading...
error: Content is protected !!