ಬ್ಯಾಂಕಿನಲ್ಲಿ ಹಳೆಯ ನೋಟುಗಳ ಕಳುವು

ಒಡಿಶಾ: ನೋಟು ರದ್ದಾದ ನಂತರ, 500 ಮತ್ತು 1000 ನೋಟುಗಳು ಯಾರೂ ಸ್ವೀಕರಿಸುತ್ತಿಲ್ಲ, ಆದರೆ ಬ್ಯಾಂಕೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಒಂದು ಕೋಟಿಗೂ ಹೆಚ್ಚು ಮೌಲ್ಯದ 500, 1000 ರ ನೋಟುಗಳನ್ನು ಕಳುವು ಮಾಡಲಾಗಿದೆ.

ಇಂದು(ಸೋಮವಾರ) ಈ ಘಟನೆ ಬೆಳಕಿಗೆ ಬಂದಿದೆ. ಎರಡು ದಿನಗಳ ವಾರಾಂತ್ಯದ ರಜೆಯ ನಂತರ ಒಡಿಶಾದಲ್ಲಿ ಒಡಿಶಾ ಗ್ರಾಮ್ಯ ಬ್ಯಾಂಕ್ ಶಾಖೆಯನ್ನು ತೆರೆದ ಅಧಿಕಾರಿಗಳಿಗೆ, ನಗದು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಬ್ಯಾಂಕಿನಲ್ಲಿ ಒಟ್ಟು ರೂ. 8 ಕೋಟಿ ಹಳೆಯ ರದ್ದಾದ ನೋಟುಗಳಿದ್ದು, ಅದರಲ್ಲಿ ರೂ. 1.15 ಕೋಟಿ ನಗದು ಇಡಲಾಗಿದ್ದ ಒಂದು ಐರನ್ ಬಾಕ್ಸ್ ಕಳುವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಗದು ಕಳ್ಳತನಕ್ಕೆ ಬ್ಯಾಂಕಿನ ಸಿಬ್ಬಂದಿಯಲ್ಲೇ ಕೆಲವರು ಸಹಕರಿಸಿರಬಹುದು ಎಂದು ಅನುಮಾನಿಸುತ್ತಿರುವುದಾಗಿ ಹೇಳಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ರೂ. 7 ಕೋಟಿ ಮೌಲ್ಯದ ಹಣವನ್ನು ಮಾತ್ರ ಬಿಗಿ ಭದ್ರತೆಯ ಕೊಠಡಿಯಲ್ಲಿಟ್ಟಿದ್ದ ಬಗ್ಗೆ ಪೊಲೀಸರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.