ಪದ್ಮಾವತಿ ಚಿತ್ರ ಬಿಡುಗಡೆಯಾದರೆ 2 ಸಾವಿರ ಮಹಿಳೆಯರು ಆತ್ಮಹತ್ಯೆಗೆ ಸಿದ್ಧರಂತೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಿತ ಚಿತ್ರಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದರೂ, ಆ ಚಿತ್ರಕ್ಕೆ ಇನ್ನೂ ಕಷ್ಟ ತಪ್ಪಿಲ್ಲ. ನಮ್ಮ ವಿರೋಧ ಲೆಕ್ಕಿಸದೆ ಚಿತ್ರ ಪ್ರದರ್ಶನ ಮಾಡಿದರೆ ಚಿತ್ರಮಂದಿರಗಳ ಎದುರು ಚಿತೆಗೆ ಹಾರಿ ಸಾಯುತ್ತೇವೆ ಎಂದು ರಜಪೂತ ಮಹಿಳೆಯರು ಶಪಥ ಮಾಡಿದ್ದಾರೆ. ಪುರುಷರೂ ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ.

ಆರಂಭದಿಂದಲೂ ವಿವಾದಕ್ಕೆ ಕಾರಣವಾಗಿರುವ ‘ಪದ್ಮಾವತಿ’ ಚಿತ್ರ ‘ಪದ್ಮಾವತ್’ ಎಂದು ಹೆಸರು ಬದಲಿಸಿಕೊಂಡು ಬಿಡುಗಡೆಯಾಗುತ್ತಿದ್ದರೂ ಜನ ಇದರಿಂದ ತೃಪ್ತರಾಗಿಲ್ಲ. ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಇನ್ನೂ ಐದು ರಾಜ್ಯಗಳಲ್ಲಿ ಪ್ರತಿಭಟನೆಯ ಬಿಸಿ ಕಾಡಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್ ಸರ್ಕಾರವು ಬಸ್ ಸೇವೆಗಳನ್ನು ರದ್ದುಗೊಳಿಸಿದೆ.

ರಜಪೂತ ಸಮುದಾಯಕ್ಕೆ ಸೇರಿದ ರಾಣಿ ಪದ್ಮಾವತಿಗೆ ಅತ್ಯುತ್ತಮ ಇತಿಹಾಸವಿದೆ. ಚಿತ್ರದ ಮೂಲಕ ಆಕೆಯ ಮಾನ ತೆಗೆಯಲು ಮುಂದಾದರೆ ನಾವು ಸುಮ್ಮನಿರುವವರಲ್ಲ ಎಂದು ಆ ಸಮುದಾಯದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾಜಸ್ಥಾನದ ಚಿತ್ತೋರ್ ಘಢ್ ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಸುಮಾರು 3 ಸಾವಿರ ರಜಪೂತ ಮಹಿಳೆಯರು ಪಾಲ್ಗೊಂಡಿದ್ದರು. ಚಿತ್ರ ಪದರ್ಶನ ನಡೆಸಿದರೆ ತಾವೆಲ್ಲಾ ಜೌಹಾರ್ (ಬೆಂಕಿಗೆ ಹಾರಿ ಜೀವ ಬಿಡುವುದು) ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜೌಹರ್ ಗೆ ನಾವು ಸಿದ್ಧ ಎಂದು ಈಗಾಗಲೇ 2 ಸಾವಿರ ಮಹಿಳೆಯರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಈ ಪಟ್ಟಿಯನ್ನೂ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು 14ನೇ ಶತಮಾನದ ರಾಣಿ ಪದ್ಮಾವತಿ ಮತ್ತು ಮುಸ್ಲಿಂ ರಾಜ ಅಲ್ಲಾವುದ್ದೀನ್ ಖಿಲ್ಜಿ ಕುರಿತು ಕಥೆಯನ್ನು ಹೊಂದಿದೆ. ಆದರೆ ಮಾನ ರಕ್ಷಣೆಗಾಗಿ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ರಾಣಿ ಪದ್ಮಾವತಿ ಮತ್ತು ಖಿಲ್ಜಿ ನಡುವೆ ಪ್ರಣಯದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು ಆಕೆಯ ಘನತೆಗೆ ಅವಮಾನ ಮಾಡಿದಂತಾಗಿದೆ ಎಂದು ಹಿಂದೂ ಸಂಘಟನೆಗಳು ಮತ್ತು ರಜಪೂತ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಚಿತ್ರದ ಹೆಸರನ್ನು ‘ಪದ್ಮಾವತಿ’ ಯಿಂದ ‘ಪದ್ಮಾವತ್’ ಎಂದು ಬದಲಿಸುವುದೂ ಸೇರಿದಂತೆ 5 ತಿದ್ದುಪಡಿಗಳನ್ನು ಸೆನ್ಸಾರ್ ಬೋರ್ಡ್ ಸೂಚಿಸಿತ್ತು. ಸುಪ್ರೀಂ ಕೋರ್ಟ್ ಕೂಡಾ ಚಿತ್ರ ಬಿಡುಗಡೆ ಸೂಚಿಸಿತ್ತು. ಆದರೆ ಇದೀಗ ಗುಜರಾತ್ ಮತ್ತು ಮಧ್ಯಪ್ರದೇಶ ಸರ್ಕಾರಗಳು ಈ ವಿಷಯದಲ್ಲಿ ಮತ್ತೊಮ್ಮೆ ಸುಪ್ರೀಂ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡಿವೆ. ಎರಡೂ ರಾಜ್ಯಗಳ ಮನವಿಯ ವಿಚಾರಣೆಗೆ ಸುಪ್ರೀಂ ಅಂಗೀಕರಿಸಿದೆ.

Get Latest updates on WhatsApp. Send ‘Subscribe’ to 8550851559