ಬ್ರಿಕ್ಸ್ ಎಫೆಕ್ಟ್: ತನ್ನ ನೆಲದಲ್ಲಿ ಉಗ್ರ ಸಂಘಟನೆಗಳಿರುವುದನ್ನು ಅಂಗೀಕರಿಸಿದ ಪಾಕ್!

ಬ್ರಿಕ್ಸ್ ಸಮಾವೇಶದ ಘೋಷಣೆಯ ನಂತರ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತರಾಷ್ಟ್ರೀಯ ಸಮುದಾಯದಿಂದ ಪಾಕ್ ಮೇಲೆ ಒತ್ತಾಡ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಪಾಕಿಸ್ತಾನವು ತನ್ನ ನೆಲದಿಂದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜೈಷ್-ಇ-ಮೊಹಮದ್ ಕಾರ್ಯಾಚರಣೆ ನಡೆಸುತ್ತಿವೆ ಎಂದು ಒಪ್ಪಿಕೊಂಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಖವಾಜಾ ಆಸಿಫ್ ಅವರೇ ಇದನ್ನು ಅಂಗೀಕರಿಸಿದ್ದಾರೆ.

ಬದಲಾದ ಸನ್ನಿವೇಶದಲ್ಲಿ ಸ್ನೇಹಿತರು(ಚೀನಾ) ಪ್ರತಿ ಬಾರಿ ಪರೀಕ್ಷೆಗೊಳಗಾಗಬಾರದು. ಇದಕ್ಕೆ ಬದಲಾಗಿ ನಾವು ಲಷ್ಕರ್-ಇ-ತೊಯ್ಬಾ ಮತ್ತು ಜೈಷ್-ಇ-ಮೊಹಮದ್ ನಂತಹ ಸಂಘಟನೆಗಳ ಮೇಲೆ ಕೆಲವು ನಿರ್ಬಂಧಗಳನ್ನು ಹೇರುವ ಮೂಲಕ ಜಾಗತಿಕ ಸಮುದಾಯಕ್ಕೆ ನಾವು ನಮ್ಮ ಮನೆ ಸರಿಯಾಗಿದೆ ಎಂದು ತೋರಿಸಿದಂತಾಗುತ್ತದೆ ಎಂದು ಪಾಕ್ ವಿದೇಶಾಂಗ ಸಚಿವರು ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಪಾಕಿಸ್ಥಾನ ಮಾಧ್ಯಮಗಳು ಪ್ರಕಟಿಸಿವೆ.

ಚೀನಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ನಾಯಕರು ಪಾಕ್ ಮೂಲಕ ಲಷ್ಕರ್ ಮತ್ತು ಜೈಷೆ ಮೊಹಮದ್ ಸಂಘಟನೆಗಳೂ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳಿಂದ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಧ್ವನಿಯೆತ್ತಿದ್ದವು.

ಪಾಕ್ ನ ಅತ್ಯಾಪ್ತ ರಾಷ್ಟ್ರವಾದ ಚೀನಾ ಕೂಡಾ ಬ್ರಿಕ್ಸ್ ಘೋಷಣೆಗೆ ದನಿಗೂಡಿಸುವ ಅನಿವಾರ್ಯತೆಗೆ ಸಿಲುಕಿತು. ಇದೇ ಮೊದಲ ಬಾರಿಗೆ ಬ್ರಿಕ್ಸ್ ಘೋಷಣೆಯಲ್ಲಿ ಪಾಕ್ ಮೂಲಕ ಉಗ್ರಗಾಮಿ ಸಂಘಟನೆಗಳನ್ನು ಸೇರಿಸಲು ಅಂಗೀಕರಿಸಿತ್ತು. ಆದರೆ ಇದರ ಬೆನ್ನಲ್ಲೇ ತನ್ನ ನೆಲ ಭಯೋತ್ಪಾದಕರಿಗೆ ಸ್ವರ್ಗಧಾಮವಲ್ಲ ಎಂದು ಪ್ರತಿಕ್ರಿಯಿಸಿತ್ತು.

[ಇದನ್ನೂ ಓದಿ: ಬ್ರಿಕ್ಸ್ ಸಮಾವೇಶದಲ್ಲಿ ಗೆದ್ದ ಭಾರತದ ರಾಜತಾಂತ್ರಿಕತೆ, ಸಂದಿಗ್ಧತೆಯಲ್ಲಿ ಚೀನಾ]

ಬ್ರಿಕ್ಸ್ ಗುಂಪಿನಲ್ಲಿ ಇತರೆ ರಾಷ್ಟ್ರಗಳೂ ಇರುವುದರಿಂದ ಬ್ರಿಕ್ಸ್ ಘೋಷಣೆ ಚೀನಾದ ಅಧಿಕೃತ ನಿಲುವು ಎಂದು ಪರಿಗಣಿಸಬಾರದು ಎಂದು ಪಾಕ್ ಸಚಿವ ಚೀನಾದ ಪಾತ್ರವಿಲ್ಲವೆಂಬುದನ್ನು ನಂಬಿಸಲು ಪ್ರಯತ್ನಿಸಿದ್ದರು. ಇದರ ಜೊತೆಗೆ ಅಫ್ಘನಿಸ್ತಾನ ಮೂಲದ ತೆಹ್ರಿಕ್-ಇ-ತಾಲಿಬಾನ್-ಪಾಕಿಸ್ತಾನ ಉಗ್ರಗಾಮಿ ಸಂಘಟನೆಯ ಹೆಸರನ್ನೂ ಬ್ರಿಕ್ಸ್ ಘೋಷಣೆಯಲ್ಲಿ ಸೇರಿಸುವಲ್ಲಿ ಚೀನಾ ಪಾತ್ರವನ್ನು ಪಾಕ್ ಸಚಿವ ಹೊಗಳಿದಿದ್ದಾರೆ.

ನಿಮ್ಮ ಮೊಬೈಲ್ ನಲ್ಲಿ ನ್ಯೂಸ್ ಅಪ್ಡೇಟ್ಸ್ ಗಾಗಿ “ADD ME” ಎಂದು ನಿಮ್ಮ ಹೆಸರಿನ ಜೊತೆ 8550851559 ಗೆ ವಾಟ್ಸಾಪ್ ಮಾಡಿ