ಶಶಿಕಲಾ, ದಿನಕರನ್ ಗೆ ಶಾಕ್ ನೀಡಿದ ಪಳನಿಸ್ವಾಮಿ – News Mirchi

ಶಶಿಕಲಾ, ದಿನಕರನ್ ಗೆ ಶಾಕ್ ನೀಡಿದ ಪಳನಿಸ್ವಾಮಿ

ಚೆನ್ನೈ: ದಿವಂಗತ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಮತ್ತು ಟಿ.ಟಿ.ವಿ ದಿನಕರನ್ ಗೆ ಆಡಳಿತ ಅಣ್ಣಾಡಿಎಂಕೆ ಪಕ್ಷ ಶಾಕ್ ನೀಡಿದೆ. ಅಣ್ಣಾಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ದಿನಕರನ್ ಅವರನ್ನು ಪಳನಿಸ್ವಾಮಿ ವರ್ಗ ಕೆಳಗಿಳಿಸಿದೆ. ಅಣ್ಣಾಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಯಾಗಿ ದಿನಕರನ್ ನೇಮಕ ಕಾನೂನು ಬಾಹಿರ ಎಂದು ಪಕ್ಷ ತೀರ್ಮಾನ ಕೈಗೊಂಡಿದೆ. ಈ ತೀರ್ಮಾನದಿಂದ ಅಣ್ಣಾಡಿಎಂಕೆ ಎರಡು ಬಣಗಳ ವಿಲೀನದ ದಾರಿ ಸುಗಮವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಈಗಾಗಲೇ ಜೈಲುವಾಸಿಯಾಗಿದ್ದರೆ, ಆಕೆ ವಾರಸುದಾರನಾಗಿ ತೆರೆಯ ಮೇಲೆ ಬಂದ ದಿನಕರನ್ ಚುನಾವಣಾ ಚಿಹ್ನೆಗೆ ಲಂಚ ನೀಡಲು ಯತ್ನಿಸಿದ ಪ್ರಕರಣದಲ್ಲಿ ಬಂಧನವಾಗಿದ್ದರಿಂದ ಅಣ್ಣಾಡಿಎಂಕೆಯಲ್ಲಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಶಶಿಕಲಾ ಸಹಚರನಾಗಿ ಸಿಎಂ ಹುದ್ದೆಗೇರಿದ ಪಳನಿಸ್ವಾಮಿ (ಇಪಿಎಸ್) ಈಗ ಸ್ವತಂತ್ರವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಾ ಆಡಳಿತ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದು ಕಡೆ ಅಣ್ಣಾಡಿಎಂಕೆಯಲ್ಲಿ ಮತ್ತೊಂದು ಪ್ರಮುಖ ಬಣವಾಗಿರುವ ಮಾಜಿ ಸಿಎಂ ಒ.ಪನ್ನೀರ್ ಸೆಲ್ವಂ (ಒಪಿಎಸ್) ಅವರೊಂದಿಗೆ ಕೈಜೋಡಿಸಿ ಪಕ್ಷವನ್ನು ಮತ್ತೆ ಬಲಪಡಿಸಕೊಳ್ಳುವ ಮೂಲಕ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ಕಡೆ ಗಮನ ಹರಿಸಿದ್ದಾರೆ. ಆದರೆ ಪಳನಿಸ್ವಾಮಿಯವರೊಂದಿಗೆ ಕೈಜೋಡಿಸಲು ಶಶಿಕಲಾ ಮತ್ತು ದಿನಕರನ್ ಅವರನ್ನು ಪಕ್ಷದಿಂದ ಹೊರಹಾಕಬೇಕೆಂಬುದು ಪನ್ನೀರ್ ಸೆಲ್ವಂ ಅವರು ಒತ್ತಾಯಿಸುತ್ತಲೇ ಬಂದಿದ್ದರು.

ಅಣ್ಣಾಡಿಎಂಕೆಯ ಎರಡೂ ಬಣಗಳ ವಿಲೀನಕ್ಕೆ ವೇದಿಕೆ ಸಿದ್ಧವಾಗುತ್ತಿದ್ದ ಸಮಯದಲ್ಲಿ ಜಾಮೀನಿನ ಮೇಲೆ ಹೊರಬಂದ ದಿನಕರನ್ ಮತ್ತೆ ವಿಲೀನಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಿಯಾದರು. ಅಣ್ಣಾಡಿಎಂಕೆ ಪಕ್ಷ ಶಶಿಕಲಾ ಅವರದ್ದಾಗಿದ್ದು, ಆಕೆಯ ಸ್ಥಾನದಲ್ಲಿ ತಾವೇ ಪಕ್ಷದ ನಾಯಕರೆಂದು ಪ್ರಚಾರ ನಡೆಸಿದ್ದರು. ಅವರ ಬೆಂಬಲಕ್ಕೆ ಕೆಲವು ಅಣ್ಣಾಡಿಎಂಕೆ ಶಾಸಕರು ನಿಂತರು. ಅಣ್ಣಾಡಿಎಂಕೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದಾಗಿ ಯಾವಾಗ ದಿನಕರನ್ ಪ್ರಚಾರಕ್ಕೆ ಮುಂದಾದರೋ, ಆಗ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣಗಳಲ್ಲಿ ಆತಂಕ ಶುರುವಾಯಿತು. ಈ ಹಿನ್ನೆಲೆಯಲ್ಲಿಯೇ ದಿನಕರನ್ ಅವರ ನೇಮಕವನ್ನು ರದ್ದುಗೊಳಿಸಿ ಪಳನಿಸ್ವಾಮಿ ತೀರ್ಮಾನ ಕೈಗೊಂಡರು.

Loading...