ಕುತೂಹಲ ಮೂಡಿಸಿದ ಮೋದಿ – ಪಳನಿಸ್ವಾಮಿ ಭೇಟಿ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ರೇಸ್ ಕೋರ್ಸ್ ರಸ್ತೆಯ ಪ್ರಧಾನಿ ನಿವಾಸದಲ್ಲಿ ಇವರಿಬ್ಬರ ಭೇಟಿ ನಡೆಯಿತು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮೋದಿ – ಪಳನಿ ಭೇಟಿ ಪ್ರಾಮುಖ್ಯತೆ ಪಡೆದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ. ಈ ವಿಷಯದಲ್ಲಿ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಮೋದಿಯವರನ್ನು ಭೇಟಿ ಮಾಡಿದ ನಂತರ ಪಳನಿಸ್ವಾಮಿ ಮಾಧ್ಯಮಗಳೊಂದಿಗೆ ಹೇಳಿದರು.

ಜಯಲಲಿತಾ ನಿಧನದ ನಂತರ ಅಣ್ಣಾಡಿಎಂಕೆ ಎರಡು ಗುಂಪುಗಳಾಗಿ ಒಡೆದು ಹೋದರೂ, ಅದರಲ್ಲಿ ದೊಡ್ಡ ಗುಂಪಿಗೆ ಪಳನಿಸ್ವಾಮಿ ನಾಯಕತ್ವ ವಹಿಸಿದ್ದಾರೆ. ಪನ್ನೀರ್ ಸೆಲ್ವಂ ನೇತೃತ್ವದ ಮತ್ತೊಂದು ಗುಂಪು ಈಗಾಗಲೇ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಪಳನಿಸ್ವಾಮಿ ಗುಂಪು ಕೂಡಾ ಬಿಜೆಪಿಗೆ ಬೆಂಬಲಿಸಿದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಸುಲಲಿತವಾಗಿ ಗೆಲುವು ಸಾಧಿಸಬಹುದು ಎನ್ನಲಾಗುತ್ತಿದೆ.

ಜುಲೈನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅವಧಿ ಮುಗಿಯಲಿದ್ದು, ಹೊಸ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಎನ್ಡಿಎ ಗೆ ಶೇ.51 ರಷ್ಟು ಎಲೆಕ್ಟೋರಲ್ ಕಾಲೇಜ್ ಬೆಂಬಲ ಬೇಕಾಗಿದೆ. ಸದ್ಯ ಬಿಜೆಪಿಗೆ ಶೇ.48.5 ರಷ್ಟು ಬೆಂಬಲವಿದ್ದು, ಅಣ್ಣಾಡಿಎಂಕೆ, ಟಿ.ಆರ್.ಎಸ್, ಬಿಜೆಡಿ ಯಂತಹ ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಬಿಜೆಪಿ ನಿರೀಕ್ಷಿಸುತ್ತಿದೆ.