ವಲಸಿಗರ ಮನ್ನಣೆಗೆ ಅಸಮಾಧಾನ, ಮಂಡ್ಯದಲ್ಲಿ ನಿಷ್ಠಾವಂತರಿಗೆ ಟಿಕೆಟ್ ನೀಡಲು ಆಗ್ರಹ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನ ಗಳಿಸುವ ಗುರಿಯನ್ನೇನೋ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಇಟ್ಟುಕೊಂಡಿದ್ದಾರೆ. ಆದರೆ ಪಕ್ಷಕ್ಕಾಗಿ ದುಡಿದ ಹಿರಿಯ ಮತ್ತು ಯುವ ನಾಯಕರನ್ನು ಕಡೆಗಣಿಸಿ ಅಧಿಕಾರ ಮೋಹದಿಂದ ಬಂದ ವಲಸೆ ನಾಯಕರಿಗೆ ಪಕ್ಷದಲ್ಲಿ ಮಣೆ ಹಾಕುತ್ತಿದ್ದಾರೆಂಬ ಅಸಮಾಧಾನಗಳು ಕೇಳಿಬರುತ್ತಿವೆ.

ಇತ್ತೀಚೆಗೆ ರಚಿಸಿದ ಮಂಡ್ಯ ಜಿಲ್ಲಾ ಬಿಜೆಪಿ ಘಟಕಕ್ಕೆ ಕೇವಲ ವಲಸೆ ನಾಯಕರುಗಳಷ್ಟೇ ಮಣೆ ಹಾಕಿದ್ದು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ ಎಂಬುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

 

ಮಂಡ್ಯ ತಾಲ್ಲೂಕಿನಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕಾದರೆ, ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದು ಹೋರಾಟಗಳಲ್ಲಿ ಸಕ್ರಿಯರಾಗಿರುವ, ಲವ್ ಜಿಹಾದ್, ಕಾವೇರಿ ಚಳುವಳಿ, ಶುಗರ್ ಫ್ಯಾಕ್ಟರಿ ಉಳಿಸಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಯುವ ನಾಯಕ ಸಿ.ಟಿ.ಮಂಜುನಾಥ್ ಅವರಿಗೆ ಈ ಬಾರಿ ಟಿಕೆಟ್ ನೀಡಬೇಕೆಂಬ ಒತ್ತಾಯಗಳೂ ಕೇಳಿಬರುತ್ತಿವೆ. ಸಿ.ಟಿ.ಮಂಜುನಾಥ್ ಅವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೂ ಕಾರ್ಯಕರ್ತರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ನಿಷ್ಠಾವಂತರಿಗೆ ಟಿಕೆಟ್ ನೀಡಬೇಕು. ಹಾಗಾದಾಗ ಮಾತ್ರ ರಾಜ್ಯಾಧ್ಯಕ್ಷರು ಹೇಳಿದಂತೆ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.