ಹೊಸ 50 ಮತ್ತು 200 ರ ನೋಟುಗಳಿಗೆ ಮುಗಿಬಿದ್ದ ಜನ – News Mirchi

ಹೊಸ 50 ಮತ್ತು 200 ರ ನೋಟುಗಳಿಗೆ ಮುಗಿಬಿದ್ದ ಜನ

ನವದೆಹಲಿ: ಗಣೇಶ ಚತುರ್ಥಿ ಕೊಡುಗೆಯಾಗಿ ಹೊಸ ನೋಟುಗಳು ಬಿಡುಗಡೆಯಾಗಿವೆ. ಹೊಸ 50 ಮತ್ತು 200 ರ ನೋಟುಗಳನ್ನು ಭಾರತೀಯ ರಿಸರ್ಬ್ ಬ್ಯಾಂಕ್ ಇಂದು(ಶುಕ್ರವಾರ) ಬಿಡುಗಡೆ ಮಾಡಿದೆ. ಚಿಲ್ಲರೆ ಸಮಸ್ಯೆ ಬಗೆಹರಿಸಿ ನಗದು ಚಲಾವಣೆಯನ್ನು ಸುಗಮಗೊಳಿಸಲು ಇವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ನೋಟುಗಳು ಬಿಡುಗಡೆಯಾಗಿರುವುದು ತಿಳಿಯುತ್ತಿದ್ದಂತೆ, ಹೊಸ ನೋಟುಗಳಿಗಾಗಿ ಜನರು ಮುಗಿಬಿದ್ದಿದ್ದಾರೆ. ದೆಹಲಿಯಲ್ಲಿನ ರಿಸರ್ವ್ ಬ್ಯಾಂಕ್ ಬಳಿ ಜನರ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹೊಸ ನೋಟುಗಳನ್ನು ವಿತ್ ಡ್ರಾ ಮಾಡಿಕೊಂಡರು.

ಹೊಸ 50 ರ ನೋಟಿನ ಮೇಲೆ ಒಂದು ಕಡೆ ಮಹಾತ್ಮಾಗಾಂಧಿ ಚಿತ್ರವಿದ್ದರೆ, ಮತ್ತೊಂದು ಕಡೆ ಹಂಪಿಯ ರಥವಿದೆ. ಹಾಗೆಯೇ ಹೊಸ ರೂ.200 ನೋಟಿನ ಮೇಲೆ ಒಂದು ಕಡೆ ಮಹಾತ್ಮಾಗಾಂಧಿ ಫೋಟೋ, ಅಶೋಕ ಸ್ತಂಭದ ಚಿಹ್ನೆ ಮತ್ತೊಂದು ಕಡೆ ಸ್ವಚ್ಛ ಭಾರತ ಲೋಗೋ, ಸಾಂಚಿ ಸ್ಥೂಪಗಳಿವೆ. ಅಷ್ಟೇ ಅಲ್ಲದೆ ಈ ಎರಡೂ ನೋಟುಗಳ ಬಣ್ಣಗಳೂ ವಿಭಿನ್ನವಾಗಿದೆ. ಇದುವರೆಗೂ ಭಾರತದಲ್ಲಿ ರೂ.1, 2, 5, 10, 50, 100, 500 ಮತ್ತು 2000 ರ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿವೆ.

ಭಾರತೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರೂ.200 ರ ನೋಟು ಮಾರುಕಟ್ಟೆಗೆ ಬಂದಿದೆ. ಹೊಸ ರೂ.50 ರ ಜೊತೆಗೆ ಹಳೆಯ ನೋಟುಗಳೂ ಚಲಾವಣೆಯಲ್ಲಿರುತ್ತವೆ ಎಂದು ಆರ್.ಬಿ.ಐ ಸ್ಪಷ್ಟಪಡಿಸಿದೆ. ಇನ್ನು ಮುಂದೆ 200 ಮತ್ತು 50 ನೋಟುಗಳಿಂದಾಗಿ ನೋಟು ಕೊರತೆ ನೀಗಲಿದೆ. ಹಳೆಯ 500 ಮತ್ತು 1000 ರ ನೋಟು ರದ್ದು ಮಾಡಿದ ನಂತರ ಮಾರುಕಟ್ಟೆಯಲ್ಲಿ ದೊಡ್ಡ ನೋಟುಗಳ ಚಲಾವಣೆ ಶೇ.86 ರಿಂದ ಶೇ.70ಕ್ಕೆ ಕುಸಿದಿತ್ತು. ಇದೀಗ ಈ ನೋಟುಗಳ ಪ್ರವೇಶದಿಂದ ದೊಡ್ಡ ನೋಟುಗಳ ಬಳಕೆ ಮತ್ತಷ್ಟು ಕುಸಿಯಬಹುದು ಎನ್ನಲಾಗುತ್ತಿದೆ.

Loading...