ಮೋದಿ ಒಂದು ಮಹಾಶಕ್ತಿ – ಲೇಖನ (ರಘುರಾಮ್) – News Mirchi

ಮೋದಿ ಒಂದು ಮಹಾಶಕ್ತಿ – ಲೇಖನ (ರಘುರಾಮ್)

ಭಾರತೀಯ ಜನತಾ ಪಕ್ಷಕ್ಕೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷ. ಆರ್ಥಿಕವಾಗಿಯೂ, ಆಧ್ಯಾತ್ಮಿಕವಾಗಿಯೂ, ನೈಸರ್ಗಿಕ ಸಂಪನ್ಮೂಲಗಳ ದೃಷ್ಟಿಯಿಂದಲೂ ಉತ್ತಮವಾದ ನಮ್ಮ ದೇಶ, ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ಇದಕ್ಕೆ ದಶಕಗಳ ಕಾಂಗ್ರೆಸ್ ಆಡಳಿತವೇ ಕಾರಣ, ಆ ನೀತಿಗಳು ನಮಗೆ ಕೆಲಸಕ್ಕೆ ಬಾರದ್ದು ಎಂದು ಬಿಜೆಪಿ ಹೇಳುತ್ತಿದೆ. ಹಾಗಾಗಿಯೇ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವ ಶಪಥ ಮಾಡಿದೆ. ಆದರೆ 125 ವರ್ಷಗಳಿಗೂ ಹೆಚ್ಚಿನ ಹಳೆಯ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಪಕ್ಷ ಯಾರು? ಅದು ನರೇಂದ್ರ ಮೋದಿ!! ಅಂದುಕೊಂಡಿದ್ದು ಸಾಧಿಸಬಲ್ಲ ನಾಯಕನಾಗಿ ಹೆಸರುವಾಸಿಯಾಗಿರುವ ಮೋದಿ, ಸತ್ಯವಾಗಲೂ ದೇಶದಲ್ಲಿ ತಮನ್ನು ಹೇಳಹೆಸರಿಲ್ಲದಂತೆ ಮಾಡುತ್ತಾರೆ ಎಂದು ಹೆದರುತ್ತಿರುವ ಕಾಂಗ್ರೆಸ್ ಪಕ್ಷ ಮೋದಿಯವರನ್ನು ಗುರಿಯಾಗಿಸಿಕೊಂಡಿದೆ. ಅವರ ಮೇಲೆ ವೈಯುಕ್ತಿಕವಾಗಿ ಟೀಕೆಗಳನ್ನು ಮಾಡುತ್ತಿದೆ. ಆದರೆ, ಕಾಂಗ್ರೆಸ್ ಗೆ ಅರ್ಥವಾಗದ್ದು ಏನೆಂದರೆ, ನರೇಂದ್ರ ಮೋದಿ ಒಬ್ಬ ವ್ಯಕ್ತಿಯಲ್ಲ, ಅವರೊಬ್ಬ ಮಹಾಶಕ್ತಿ.

ಸ್ಪಷ್ಟವಾದ ಆಲೋಚನೆಗಳು, ಪ್ರಾಮಾಣಿಕವಾಗಿ ಅವುಗಳನ್ನು ಜಾರಿ ಮಾಡುವ ಸಾಮರ್ಥ್ಯವಿರುವಾಗ, ದಾರಿಯಲ್ಲಿ ಎದುರಾಗುವ ಅಡೆತಡೆಗಳು, ವಿರೋಧಗಳನ್ನು ಸಮರ್ಥವಾಗಿ ಎದುರಿಸಿ ಸಾಗಬಲ್ಲ ಶಕ್ತಿ ಬರುತ್ತದೆ. ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡುವ ವಿಷಯದಲ್ಲಿ ನಡೆದಿದ್ದೂ ಅದೇ. ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಣಾಮಗೊಳಿಸಬೇಕೆಂದೇ ಪ್ರಧಾನಿ ಮೋದಿ ಗುರಿ. ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಅವರು ಅದೇ ಕೆಲಸದಲ್ಲಿದ್ದಾರೆ. ನಿಸ್ವಾರ್ಥವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದರ ಭಾಗವಾಗಿಯೇ ಐತಿಹಾಸಿಕ ದೊಡ್ಡ ನೋಟು ರದ್ದು ಕ್ರಮ ಕೈಗೊಂಡರು. ಖಚಿತವಾಗಿ ಪ್ರಜೆಗಳಿಗೆ ಸಮಸ್ಯೆಗಳು ಎದುರಾಗುತ್ತವೆ, ಅವುಗಳನ್ನು ಭರಿಸಬೇಕು ಎಂದು ಸ್ವತಃ ಪ್ರಧಾನಿ ಕರೆ ನೀಡಿದರು. ಆದರೆ, ಈ 50 ದಿನಗಳಲ್ಲಿ ಪ್ರತಿಪಕ್ಷಗಳು ನಾನಾ ರಾದ್ಧಾಂತಗಳನ್ನು ಮಾಡಿದವು. ಪ್ರಜೆಗಳಲ್ಲಿ ಆತಂಕವನ್ನು ಸೃಷ್ಟಿಸಲು ಕೆಲ ಪಕ್ಷಗಳು ರಸ್ತೆಗಿಳಿದವು. ಎರಡೂವರೆ ವರ್ಷಗಳಲ್ಲಿ ಗಳಿಸಿದ ಹೆಸರು ನೋಟು ರದ್ದು ಕ್ರಮದಿಂದ ಕಳೆದುಕೊಂಡರು ಎಂದು ಒಳಗೊಳಗೆ ಖುಷಿಯನ್ನೂ ಅನುಭವಿಸಿದವು. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಇನ್ನು ಕೆಲ ಪಕ್ಷಗಳು ಸಂಭ್ರಮಿಸಿದವು. ಒಂದು ವರ್ಗದ ಪತ್ರಿಕೆಗಳು, ಚಾನೆಲ್ ಗಳು ಮೋದಿಯನ್ನು ಅಪರಾಧಿಯನ್ನಾಗಿ ಬಿಂಬಿಸಲು ಶತಪ್ರಯತ್ನ ನಡೆಸಿದವು. ಆದರೆ, ಪ್ರಜೆಗಳ ಬೆಂಬಲ ಯಾರಿಗಿದೆ ಎಂಬುದು ನೋಟು ರದ್ದು ನಡೆದ ಕೆಲ ಚುನಾವಣಾ ಫಲಿತಾಂಶಗಳು ಹೇಳುತ್ತಿವೆ.

ಚಂಡೀಘಡದಲ್ಲಿ ನಗರಸಭೆ ಚುನಾವಣೆಗಳಲ್ಲಿ ಬಿಜೆಪಿ ಒಟ್ಟು 23 ರಲ್ಲಿ ಸ್ಪರ್ಧಿಸಿ 20 ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿತು. ದೊಡ್ಡ ನೋಟು ರದ್ದು ನಡೆದ ಮೊದಲ ಚುನಾವಣೆ ಇದೇ. ಆ ನಂತರ ಸತತವಾಗಿ ಗುಜರಾತ್ ಚತ್ತೀಸಘಡ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ, ವಿಧಾನಪರಿಷತ್ ಚುನಾವಣೆಗಳಲ್ಲೂ ಬಿಜೆಪಿ ವಿಜಯಪತಾಕೆ ಹಾರಿಸಿತು. ಆದರೆ, ಆಯಾ ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಕಾರಣ, ಈ ಫಲಿತಾಂಶ ಅಷ್ಟು ಪ್ರಾಮುಖ್ಯತೆ ಪಡೆಯಲಿಲ್ಲ. ಆದರೆ ಕಳೆದ ಕಳೆದ ಹತ್ತು ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಪ್ರಕಟವಾಗುತ್ತಿರುವ ಚುನಾವಣಾ ಫಲಿತಾಂಶಗಳು ಮಾತ್ರ ಬಿಜೆಪಿಯ ಗೆಲುವಿನ ಪರಂಪರೆಯನ್ನು ಸಾರಿ ಹೇಳುತ್ತಿವೆ.

ಒರಿಸ್ಸಾ ರಾಜ್ಯದಲ್ಲಿ ನವೀನ್ ಪಟ್ನಾಯಕ್ ಹ್ಯಾಟ್ರಿಕ್ ಗೆಲುವಿನೊಂದಿಗೆ ಬಿಜೂ ಜನತಾದಳವನ್ನು ಸಾಟಿಯಿಲ್ಲದ ಶಕ್ತಿಯಾಗಿ ಗಟ್ಟಿಗೊಳಿಸಿದ್ದರು. ಅಲ್ಲಿನ ಜಿಲ್ಲಾ ಪಂಚಾಯ್ತಿಗಳಲ್ಲಿ ಬಿಜೆಪಿ ಬಲ ಕೇವಲ 36 ಸ್ಥಾನಗಳು ಮಾತ್ರ. ಕಳೆದ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಪಕ್ಷ ಎಲ್ಲಾ ಜಿಲ್ಲಾ ಪಂಚಾಯ್ತಿಗಳನ್ನು ವಶಪಡಿಸಿಕೊಂಡಿತ್ತು. ಮೊನ್ನೆ ನಡೆದ ಚುನಾವಣೆಗಳಲ್ಲಿ ಮಾತ್ರ ಆ ಪಕ್ಷ ನೆಲಕಚ್ಚಿದೆ. ಬಿಜೆಪಿ 306 ಸ್ಥಾನಗಳಲ್ಲಿ ಗೆದ್ದು ರಾಜಕೀಯ ವಿಶ್ಲೇಷಕರನ್ನೂ ಆಶ್ಚರ್ಯಗೊಳಿಸಿದೆ. ಒರಿಸ್ಸಾ ಗ್ರಾಮೀಣ ಭಾರತದಲ್ಲಿ ನರೇಂದ್ರ ಮೋದಿ ಅಲೆ ನೋಟು ರದ್ದು ನಂತರ ಹೇಗೆ ಜೋರಾಗಿದೆಯೋ ಈ ಫಲಿತಾಂಶಗಳು ಹೇಳುತ್ತಿವೆ. ಕೆಲ ಜಿಲ್ಲೆಗಳಲ್ಲಿ ಕಾಂಗ್ರೆಸ್, ಬಿಜೆಡಿಗಳಿಗೆ ಠೇವಣಿಗಳೂ ಸಿಗಲಿಲ್ಲವೆಂದರೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು.

ಇತ್ತ ಮಹಾರಾಷ್ಟ್ರ ಕಾರ್ಪೊರೇಷನ್ ಚುನಾವಣೆಯಲ್ಲಿ ಮತ್ತಷ್ಟು ಅದ್ಭುತವಾದ ಫಲಿತಾಂಶ ಬಂದಿದೆ. ನೋಟು ರದ್ದು ಕ್ರಮ ತಮಗೆ ಅನುಕೂಲವಾಗುತ್ತದೆ ಎಂದುಕೊಂಡ ಎನ್.ಸಿ.ಪಿ, ಕಾಂಗ್ರೆಸ್ ಪಕ್ಷಗಳಿಗೆ ಚೇತರಿಸಿಕೊಳ್ಳಲಾಗದ ಫಲಿತಾಂಶ ಕೊಟ್ಟಿದ್ದಾರೆ ಅಲ್ಲಿನ ಮತದಾರರು. ಒಟ್ಟು 10 ನಗರಸಭೆಗಳಲ್ಲಿ 8ರಲ್ಲಿ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸಿದೆ. ಬೃಹತ್ ಮುಂಬಯಿ ಕಾರ್ಪೊರೇಷನ್ ನಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಂಬೈನಲ್ಲಿ ಹಾರಲಿರುವುದು ಕಮಲದ ಪತಾಕೆಯೇ. ಒಟ್ಟು ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ ಏಕಾಂಗಿಯಾಗಿ ಎಷ್ಟು ಸೀಟು ಬಂದಿವೆಯೋ ಉಳಿದ ಪಕ್ಷಗಳಿಗೆಲ್ಲಾ ಸೇರಿ ಅಷ್ಟು ಸೀಟು ಕೂಡಾ ದೊರೆತಿಲ್ಲ. ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಕಮಲ ಅರಳಿದೆ. ಜಿಲ್ಲಾ ಪಂಚಾಯ್ತಿಗಳಲ್ಲಿ ಬಿಜೆಪಿ 341 ಸ್ಥಾನಗಳಲ್ಲಿ ಗೆಲುವು ಕಂಡಿದೆ.

ಯಾರೂ ಗಮನಿಸದ ವಿಷಯವೆಂದರೆ, ಉತ್ತರ ಪ್ರದೇಶದ ಕಾನ್ಪು, ಗೋರಖ್ ಪುರ, ಬರೇಲಿ ವಿಧಾನಪರಿಷತ್ ಸ್ಥಾನಗಳಿಗೆ ಇತ್ತೀಚೆಗಷ್ಟೇ ಚುನಾವಣೆ ನಡೆಯಿತು. ಈ ಮೂರು ಕಡೆಯೂ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಕಂಡಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಈ ಗೆಲುವನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ. ಬಹುಶಃ ಬಿಜೆಪಿ ಸೋತಿದ್ದರೆ ದೇಶವೆಲ್ಲಾ ಪ್ರಚಾರ ಮಾಡುತ್ತಿದ್ದರೇನೋ. ಆದರೆ ಅಂಡಮಾನ್ ನಿಂದ ಅಸ್ಸಾಂ, ತಿರುವನಂತಪುರಂ ನಿಂದ ಶ್ರೀನಗರದವರೆಗೂ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಗುರಿಯನ್ನಿಟ್ಟುಕೊಂಡು ಬಿಜೆಪಿ ಮುಂದೆ ಸಾಗುತ್ತಿದೆ. ಅದಕ್ಕೆ ಇತ್ತೀಚಿನ ಚುನಾವಣಾ ಫಲಿತಾಂಶಗಳೇ ಸಾಕ್ಷಿ. ಲೋಕಸಭಾ ಚುನಾವಣೆಯಲ್ಲಿ ನೆಲಕಚ್ಚಿದ ನಂತರ ಕಾಂಗ್ರೆಸ್ ಪತನ ಆರಂಭವಾಗಿದೆ. ದೇಶದಲ್ಲಿ ಒಂದೇ ಒಂದು ದೊಡ್ಡ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇಲ್ಲಿಯೂ ಚುನಾವಣೆ ಸಮಯ ಸಮೀಪಿಸುತ್ತಿದೆ. ಪುದುಚ್ಚೇರಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎರಡು ಕಡೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮಧ್ಯ ಪ್ರದೇಶ, ಚತ್ತೀಸಘಡ, ತಮಿಳುನಾಡು, ಗುಜರಾತ್, ಒರಿಸ್ಸಾ, ಆಂಧ್ರಪ್ರದೇಶ, ದೆಹಲಿ ಮುಂತಾದ ರಾಜ್ಯಗಳಲ್ಲಿ ದಶಕಗಳೇ ಅಧಿಕಾರದಿಂದ ಹೊರಗಿರಲೇಬೇಕು.

ಇದಕ್ಕೂ ಮುನ್ನ ಹೇಳಿದಂತೆ ನರೇಂದ್ರ ಮೋದಿ ಒಂದು ಮಹಾಶಕ್ತಿ ಆಗಿ ಉದ್ಭವಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಅವರು 74 ಯೋಜನೆಗಳನ್ನು ತಂದು ದೇಶದ ಜನರ ಮೆಚ್ಚುಗೆ ಪಡೆದಿದ್ದಾರೆ. ಅಭಿವೃದ್ಧಿ, ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ದೇಶಕ್ಕೆ ಅಗತ್ಯ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿ ವಿಶ್ವಾದ್ಯಂತ ಉತ್ತಮ ನಾಯಕನೆಂದು ಕೀರ್ತಿ ಗಳಿಸಿದ್ದಾರೆ. ಮೋದಿ ನಾಯಕತ್ವದಲ್ಲಿ ಗ್ರಾಮೀಣ ಜನರು, ನಗರ ಪ್ರಜೆಗಳು ಮಾತ್ರವಲ್ಲದೆ ಇಡೀ ದೇಶ ನಂಬಿಕೆ ಇಟ್ಟಿದೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ಮಾತ್ರ ಆಂತರಿಕ ಸಮಸ್ಯೆಗಳಿಂದ ಒದ್ದಾಡುತ್ತಿದೆ. ಅನಾರೋಗ್ಯ ಕಾರಣದಿಂದ ಸೋನಿಯಾ ಗಾಂಧಿ ಮನೆಗೆ ಸೀಮಿತವಾಗಿದ್ದಾರೆ. ಈ ಸಂದರ್ಭದಲ್ಲಿ ತನ್ನ ನಾಯಕತ್ವವನ್ನು ಸಾಬೀತುಪಡಿಸಿಕೊಳ್ಳಬೇಕಾದ ರಾಹುಲ್ ಗಾಂಧಿ ಎಡವುತ್ತಿದ್ದಾರೆ. ರಾಹುಲ್ ಗಾಂಧಿಗೆ ಇನ್ನೂ ಪಕ್ವತೆ ಇಲ್ಲ, ಸ್ವಲ್ಪ ಸಮಯ ನೀಡಬೇಕು ಎಂದ ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಹೇಳಿತ ಮಾತುಗಳು ಅಕ್ಷರಶಃ ಸತ್ಯ. ವ್ಯಕ್ತಿ ಪೂಜೆ, ಕುಟುಂಬ ರಾಜಕಾರಣ ಮಾಡುತ್ತಾ ವೈಯುಕ್ತಿಕ ಹೋರಾಟಕ್ಕಿಳಿದರೆ ಕಾಂಗ್ರೆಸ್ ಇತಿಹಾಸದ ಭಾಗವಾಗಿ ಹೋಗುವುದು ಖಚಿತ. ಸಿದ್ಧಾಂತಗಳ ಆಧಾರದ ಮೇಲೆ, ಮೌಲ್ಯಗಳಿಂದ ಕೂಡಿದ ರಾಜಕೀಯ ಮಾಡುತ್ತಿರುವ ಬಿಜೆಪಿಯದ್ದೇ ಭವಿಷ್ಯತ್ತು.

-ಪುರಿಘಳ್ಳ ರಘುರಾಮ್

ಬಿಜೆಪಿ ಸಂಘಟಕ, ದೆಹಲಿ

Loading...

Leave a Reply

Your email address will not be published.