ಜೂನ್ 16 ರಿಂದ ಪೆಟ್ರೋಲ್, ಡೀಸೆಲ್ ಬಂದ್? |News Mirchi

ಜೂನ್ 16 ರಿಂದ ಪೆಟ್ರೋಲ್, ಡೀಸೆಲ್ ಬಂದ್?

ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯನ್ನಾಧರಿಸಿ ಪ್ರತಿದಿನ ದರ ಪರಿಷ್ಕರಣೆಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಪ್ರಾಯೋಗಿಕವಾಗಿ ಕೆಲವು ನಗರಗಳಲ್ಲಿ ಇದನ್ನು ಜಾರಿ ಮಾಡಿದೆ. ಆದರೆ ಕೇಂದ್ರದ ಈ ತೀರ್ಮಾನಕ್ಕೆ ಪೆಟ್ರೋಲ್ ಬಂಕ್ ಮಾಲೀಕರ ಸಂಘಗಳು ವಿರೋಧ ವ್ಯಕ್ತಿಪಡಿಸಿವೆ. ಜೂನ್ 16 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತೈಲ ಕಂಪನಿಗಳಿಂದ ಖರೀದಿಸದೆ ಪ್ರತಿಭಟನೆ ವ್ಯಕ್ತಪಡಿಸಲು ಸಂಘಟನೆಗಳು ನಿರ್ಧರಿಸಿವೆ.

ಇದು ಮುಷ್ಕರವಲ್ಲ, ಬದಲಿಗೆ 16 ರಿಂದ ಪೆಟ್ರೋಲ್, ಡೀಸೆಲ್ ಮಾತ್ರ ಖರೀದಿಸುವುದಿಲ್ಲ ಎಂದು ಅಖಿಲ ಭಾರತ ಪೆಟ್ರೋಲಿಯಂ ಡೀಲರ್ ಸಂಘದ ಅಧ್ಯಕ್ಷ ಅಜಯ್ ಬನ್ಸಾಲ್ ಹೇಳಿದ್ದಾರೆ. ಜೂನ್ 16 ರಿಂದ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಣೆ ಮಾಡುತ್ತೇವೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿದ ಬೆನ್ನಲ್ಲೇ, ಬಂಕ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ನೀತಿ ಜಾರಿಯಲ್ಲಿರುವ ಐದು ನಗರಗಳಲ್ಲಿ ಬಂಕ್ ಮಾಲೀಕರು ನಷ್ಟಗೊಂಡಿದ್ದಾರೆ, ಹೀಗಾಗಿ ದೇಶಾದ್ಯಂತ ಇದನ್ನು ಜಾರಿ ಮಾಡುವ ವಿಷಯದಲ್ಲಿ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶಾದ್ಯಂತ ಸುಮಾರು 57 ಸಾವಿರ ಪೆಟ್ರೋಲ್ ಬಂಕ್ ಗಳಿದ್ದು, ಇವುಗಳಲ್ಲಿ ಐಒಸಿ, ಬಿಪಿಸಿಎಎಲ್, ಹೆಚ್.ಪಿ.ಸಿ.ಎಲ್ ನೇತೃತ್ವದಲ್ಲಿ 53 ಸಾವಿರ ಪೆಟ್ರೋಲ್ ಬಂಕುಗಳು ಕಾರ್ಯಚರಣೆ ನಡೆಸುತ್ತಿವೆ. ಅಂತರಾಷ್ಟ್ರೀಯ ತೈಲ ಬೆಲೆಗಳಿಗೆ ಅನುಗುಣವಾಗಿ ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲ್, ಡೀಸೆಲ್ ದರಗಳನ್ನು ಪರಿಷ್ಕರಿಸಲಾಗುತ್ತಿದೆ. ಪ್ರತಿ ದಿನ ದರಗಳ ಪರಿಷ್ಕರಣೆಯನ್ನು ಪ್ರಾಯೋಗಿಕವಾಗಿ ಮೇ 1 ರಿಂದ ಪುದುಚ್ಚೇರಿ, ಚಂಡೀಗಢ, ಜಮ್ಷೆಡ್ ಪುರ, ಉದಯಪುರ, ವಿಶಾಖಪಟ್ಟಣದಲ್ಲಿ ಜಾರಿ ಮಾಡಲಾಗಿದೆ. ಎಸ್ಸಾರ್, ರಿಲಯನ್ಸ್ ಇಂಡಸ್ಟ್ರೀಸ್ ನಂತ ಖಾಸಗಿ ಸಂಸ್ಥೆಗಳು ಸಹಾ ಈ ಪದ್ದತಿಯನ್ನು ಅನುಸರಿಸುತ್ತಿವೆ. ಸ್ಟಾಕ್ ಮೌಲ್ಯ ಕುಸಿಯುತ್ತದೆ ಎಂಬ ಭಯದಿಂದ ಪ್ರತಿ ದಿನ ದರ ಪರಿಷ್ಕರಣೆಗೆ ಡೀಲರ್ ಗಳು ಹೆದರುತ್ತಿದ್ದಾರೆ. ಪ್ರತಿ ದಿನ ದರ ಪರಿಷ್ಕರಣೆ ಮಾಡುವುದರಿಂದ ಪಾರದರ್ಶಕತೆ ಹೆಚ್ಚುತ್ತದೆ, ಚಿಲ್ಲರೆ ಮಾರಾಟದಲ್ಲಿ ಎದುರಾಗುವ ಏರಿಳಿತ ಸಮಸ್ಯೆಗಳು ಬಹುತೇಕ ಕಡಿಮೆಯಾಗುತ್ತವೆ ಎಂದು ತೈಲ ಕಂಪನಿಗಳು ಹೇಳುತ್ತಿವೆ

Loading...
loading...
error: Content is protected !!