ಪೆಟ್ರೋಲ್ ಬಂಕುಗಳಿಗೂ ಇನ್ನು ಮುಂದೆ ಭಾನವಾರ ರಜೆ?

View Later

ಸರ್ಕಾರಿ ಕಛೇರಿಗಳಿಗಿದ್ದಂತೆ ಇನ್ನು ಮುಂದೆ ಪ್ರತಿ ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಗಳ ಮಾಲೀಕರು ರಜೆ ಪಡೆಯಲಿದ್ದಾರೆ. ಮೇ 14 ರಿಂದ ಪ್ರತಿ ಭಾನುವಾರ ತಮ್ಮ ರೀಟೇಲ್ ಔಟ್ಲೆಟ್ ಗಳನ್ನು ಮುಚ್ಚುವುದಾಗಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ಇಂಧನ ಬಳಕೆಯನ್ನು ಕಡಿಮೆ ಮಾಡಲು ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಕನ್ಸೋರ್ಟಿಯಂ ಆಫ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್(ಸಿಐಪಿಡಿ) ಹೇಳಿದೆ. 2017 ಮೇ 14ರಿಂದ ಪ್ರತಿಯೊಬ್ಬ ಡೀಲರ್ ರಜೆ ಪಡೆಯಬೇಕು ಎಂದು ಆದೇಶಿಸಿರುವುದಾಗಿ ಸಿಐಪಿಡಿ ಅಧ್ಯಕ್ಷ ಎ.ಡಿ.ಸತ್ಯನಾರಾಯಣ ಹೇಳಿದ್ದಾರೆ.

ಈ ಪ್ರಭಾವ ದೇಶಾದ್ಯಂತ ಇರುವ 25 ಸಾವಿರ ಪೆಟ್ರೋಲ್ ಬಂಕ್ ಗಳ ಮೇಲೆ ಬೀಳಲಿದೆ. ಒಂದು ಲೀಟರ್ ಡೀಸೆಲ್ ಮೇಲೆ ರೂ.1.65, ಲೀಟರ್ ಪೆಟ್ರೋಲ್ ಮೇಲೆ ರೂ.2.56 ಕಮೀಷನ್ ಅನ್ನು ಡೀಲರ್ ಗಳು ಪಡೆಯುತ್ತಿದ್ದಾರೆ. ಈ ಕಮೀಷನರ್ ಅನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ ಡೀಲರ್ ಗಳು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ ಸರ್ಕಾರ ಇಲ್ಲಿಯವರೆಗೂ ಡೀಲರ್ಸ್ ಕಮೀಷನ್ ಹೆಚ್ಚಳ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದನ್ನು ಪ್ರತಿಭಟಿಸಲೂ ಪ್ರತಿ ಭಾನುವಾರ ರೀಟೇಲ್ ಔಟ್ಲೆಟ್ ಗಳನ್ನು ಮುಚ್ಚುವುದಾಗಿ ಅವರು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೇ ಮೇ 10ನ್ನು ನೋ ಪರ್ಚೇಸ್ ಡೇ ಎಂದು ಆಚರಿಸಿದ್ದಾರೆ.

ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಜಯ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಆದರೆ ಇದರ ಪ್ರಭಾವ ದೇಶಾದ್ಯಂತ ಇರುವುದಿಲ್ಲ. ಸಿಐಪಿಡಿ ಸಕ್ರಿಯವಾಗಿರುವ ರಾಜ್ಯಗಳಲ್ಲಿ ಮಾತ್ರ ಭಾನುವಾರಗಳಂದು ಪೆಟ್ರೋಲ್, ಡೀಸೆಲ್ ಬಂಕ್ ಗಳು ಮುಚ್ಚಿರುತ್ತವೆ ಎಂದು ಅವರು ಹೇಳಿದ್ದಾರೆ. ಅಸೊಸಿಯೇಷನ್ ತೆಗೆದುಕೊಂಡು ತೀರ್ಮಾನಕ್ಕೆ ತಮ್ಮ ಬೆಂಬಲವಿಲ್ಲ. ಕಮೀಷನ್ ಹೆಚ್ಚಳಕ್ಕೆ ತಮ್ಮ ಒತ್ತಾಯವಿದೆ, ಆದರೆ ಬಂಕುಗಳನ್ನು ಮುಚ್ಚುವ ನಿರ್ಧಾರ ಸರಿಯಲ್ಲ ಎಂದರು.