ಭೂಮಾಲಿಕರಿಗೆ ದುಸ್ವಪ್ನವಾಗಿದ್ದ ಪೂಲನ್ ದೇವಿ ಕುಟುಂಬ ಪರಿಸ್ಥಿತಿ ಹೇಗಿದೆ ನೋಡಿ… – News Mirchi

ಭೂಮಾಲಿಕರಿಗೆ ದುಸ್ವಪ್ನವಾಗಿದ್ದ ಪೂಲನ್ ದೇವಿ ಕುಟುಂಬ ಪರಿಸ್ಥಿತಿ ಹೇಗಿದೆ ನೋಡಿ…

ಚಂಬಲ್ ಕಣಿವೆಯಲ್ಲಿ ಒಂದು ಕಾಲದಲ್ಲಿ ಡಕಾಯಿತಿ ಪೂಲನ್ ದೇವಿ ಹೆಸರು ಕೇಳಿದರೆ ಸಾಕು ಭೂಮಾಲೀಕರು ಗಡಗಡ ನಡುಗುತ್ತಿದ್ದರು. 1980 ರ ಸಮಯದಲ್ಲಿ ಆಕೆಯನ್ನು ಹಿಡಿಯಲು ಪೊಲೀಸರೂ ಹೆದರುತ್ತಿದ್ದರು. ಅಂತಹ ಪೂಲನ್ ದೇವಿ ಎಷ್ಟು ಹಣ ಕೂಡಿಟ್ಟಿರಬಹುದು ಎಂದು ನಾವು ಯೋಚಿಸಬಹುದು. ಆದರೆ ಈಗ ಆಕೆಯ ತಾಯಿ ಮತ್ತು ತಂಗಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಪೂಲನ್ ದೇವಿ ತಾಯಿ ಮೂಲಾದೇವಿಗೆ ಈಗ 70 ವರ್ಷ ವಯಸ್ಸಾಗಿದೆ. ಪೂಲನ್ ದೇವಿ ಡಕಾಯಿತಿಯಾಗಿದ್ದ ಸಂದರ್ಭದಲ್ಲಿ ಆಕೆಯ ತಾಯಿ ಮೂಲಾದೇವಿ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಜನರೆಲ್ಲಾ ತಲೆಬಾಗಿ ನಮಸ್ಕರಿಸುತ್ತಿದ್ದರು. ಆಕೆಯನ್ನು ನೋಡಲೂ ಭಾರೀ ಜನ ಆಗಮಿಸುತ್ತಿದ್ದರು. ಆದರೆ ಈಗ ಆಕೆ ಆ ನೆನಪುಗಳೊಂದಿಗೆ ಬದುಕುತ್ತಿದ್ದಾಳೆ.

ಕಳೆದ ವರ್ಷ ಬರಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸುತ್ತಿದ್ದ ಎನ್.ಜಿ.ಒ ಒಂದರ ಸದಸ್ಯರುಗಳಿಗೆ ಮೂಲಾದೇವಿ ಮತ್ತು ಆಕೆಯ ಪುತ್ರಿ ರಾಮ್ ಕಲೀ(ಪೂಲನ್ ದೇವಿ ತಂಗಿ) ಕಣ್ಣಿಗೆ ಬಿದ್ದಿದ್ದಾರೆ. ಇಬ್ಬರೂ ಬರದಿಂದ ಒಂದ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಎನ್.ಜಿ.ಒ ಸದಸ್ಯರು ಅವರ ಮನೆಗೆ ಹೋದ ಸಂದರ್ಭದಲ್ಲಿ ಸ್ವಲ್ಪ ಗೋಧಿ ಹಿಟ್ಟು, ಕಾಲ ಕೆಜಿ ಈರುಳ್ಳಿ ಬಿಟ್ಟರೆ ಮತ್ತೇನೂ ಇರಲಿಲ್ಲ. 17 ವರ್ಷಗಳ ಹಿಂದೆ ಸಂಸದೆಯಾಗಿಯೂ ಪೂಲನ್ ದೇವಿ ಕೆಲಸ ಮಾಡಿದ್ದು, ಈಗ ಆ ಕುಟುಂಬ ಬೀದಿಗೆ ಬಂದಿದೆ. ಶೇಖ್ ಪುರ್ ಗುಢಾ ಗ್ರಾಮ ಹೊರವಲಯದಲ್ಲಿ ಅವರಿಗೆ ಸ್ವಲ್ಪ ಭೂಮಿ ಇದೆ. ಆದರೆ ರಾಮ್ ಕಲೀ ಉದ್ಯೋಗ ಖಾತರಿ ಯೋಜನೆಯ ಕೆಲಸ ಸಿಕ್ಕರೆ ಹೋಗಿ ದುಡಿದು ತಿಂಗಳಿಗೆ ರೂ.300 ರಿಂದ 400 ವರೆಗೂ ಗಳಿಸುತ್ತಾಳೆ. ಅದಕ್ಕಿಂತ ಹೆಚ್ಚು ಆದಾಯವಿಲ್ಲ.

ಪೂಲನ್ ದೇವಿ ತಂಗಿ

ಚುನಾವಣೆ ಸಮಯದಲ್ಲಿ ಮಾತ್ರ ನಾಯಕರು ತಮ್ಮ ಬಳಿಗೆ ಬರುತ್ತಾರೆ, ಅವರು ತನ್ನನ್ನು ವೇದಿಕೆಯ ಮೇಲೆ ತೋರಿಸಿ ತನಗೆ ರೂ. 200 ನೀಡುತ್ತಾರೆ ಎಂದು ರಾಮ್ ಕಲೀ ಹೇಳುತ್ತಾರೆ. ಆದರೆ ನಂತರದ ದಿನಗಳಲ್ಲಿ ಇತರೆ ಅಭ್ಯರ್ಥಿಗಳಿಂದ ತನಗೆ ಬೆದರಿಕೆಗಳು ಬಂದ ಕಾರಣ ಅದನ್ನೂ ಬಿಟ್ಟೆ ಎನ್ನುತ್ತಾರೆ. ಪೂಲನ್ ದೇವಿ 1983ರಲ್ಲಿ ಪೊಲೀಸರಿಗೆ ಶರಣಾಗಿದ್ದಳು. ಆಕೆಯ ಮೇಲೆ 48 ಪ್ರಕರಣಗಳಿದ್ದವು. ನಂತರದ ದಿನಗಳಲ್ಲಿ ಅವುಗಳನ್ನೆಲ್ಲಾ ಮುಲಾಯಂ ಸಿಂಗ್ ಯಾದವ್ ಸರ್ಕಾರ ರದ್ದುಗೊಳಿಸಿತ್ತು. 1994 ರಲ್ಲಿ ಜೈಲಿನಿಂದ ಹೊರಬಂದ ಎರಡು ವರ್ಷಗಳಲ್ಲಿ ಪೂಲನ್ ದೇವಿ ಮೀರ್ಜಾಪುರ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದರು. 1999ರಲ್ಲಿ ಮತ್ತೊಮ್ಮೆ ಗೆದ್ದು ಬಂದರೂ 2001ರ ಜುಲೈ 25ರಂದು ಆಕೆಯ ಅಧಿಕೃತ ನಿವಾಸದ ಬಳಿಯೇ ಗುಂಡೇಟಿಗ ಬಲಿಯಾದಳು.

ಸಂಸತ್ತಿನಲ್ಲಿ ಪೂಲನ್ ದೇವಿ

ಪೂಲನ್ ಹತ್ಯೆಯಾದ ನಂತರ ತಮ್ಮ ಜಮೀನನ್ನೆಲ್ಲಾ ಠಾಕೂರರು ಕಬಳಿಸಿದರು, ಅಂದಿನಿಂದ ತಮಗೆ ಕಷ್ಟಗಳು ಆರಂಭವಾದವು ಎಂದು ಮೂಲಾದೇವಿ ಹೇಳುತ್ತಾರೆ. ತನ್ನ ಚಿಕ್ಕ ಮಗಳಿಗೆ ಪಕ್ಷದ ಟಿಕೆಟ್ ನೀಡುವುದಾಗಿ ಮುಲಾಯಂ ಸಿಂಗ್ ಹೇಳಿದ್ದರು, ಆದರೆ ನಂತರ ಮರೆತು ಬಿಟ್ಟರು ಎನ್ನುತ್ತಾರೆ.

Loading...

Leave a Reply

Your email address will not be published.