ಹಿಂದಿನ ಗೇಟುಗಳಲ್ಲೂ ಕ್ಯಾಮೆರಾ ಇಟ್ಟಿರುವುದು ಅವರಿಗೆ ಗೊತ್ತಿಲ್ಲ

ನವದೆಹಲಿ: ಹಳೆಯ ನೋಟು ರದ್ದು ನಂತರ ಜನಸಾಮಾನ್ಯರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತಿದ್ದರೆ, ಇತ್ತ ಯಾರಿಗೂ ಅನುಮಾನ ಬರದಂತೆ ಕಪ್ಪು ಕುಬೇರರಿಗೆ ಭಾರೀ ಪ್ರಮಾಣದಲ್ಲಿ ಕಪ್ಪು ಹಣ ಬಿಳಿಯಾಗಿಸಿಕೊಳ್ಳಲು ಬ್ಯಾಂಕ್ ಅಧಿಕಾರಿಗಳೇ ಸಹಕಾರ ನೀಡಿದರು. ಈ ರೀತಿಯ ಆರೋಪಗಳ ಬೆನ್ನಲ್ಲೇ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದ ಹಲವು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದಾರೆ, ಇನ್ನು ಕೆಲವರ ವಿಚಾರಣೆಯೂ ನಡೆಯುತ್ತಿದೆ. ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇದನ್ನೆಲ್ಲಾ ನೋಡುತ್ತಿದ್ದರೆ, ಪ್ರಧಾನಿ ಮೋದಿ ಆದೇಶದ ಹಿನ್ನೆಲೆಯಲ್ಲಿಯೇ ಬ್ಯಾಂಕ್ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರ ಕುಟುಕು ಕಾರ್ಯಚರಣೆ ನಡೆಸಿದೆಯಾ ಎಂಬ ಅನುಮಾನಗಳು ಏಳುತ್ತಿವೆ.

‘ಗರಿಷ್ಠ ಮುಖಬೆಲೆಯ ನೋಟು ರದ್ದುಗೊಂಡಿದ್ದರಿಂದ ಹಲವು ದಿನ ಸಮಸ್ಯೆಗಳು ಎದುರಾಗಬಹುದು. ಆದರೆ 125 ಕೋಟಿ ಜನರ ಕನಸು ನನಸಾಗದಂತೆ ಅಕ್ರಮಗಳಿಗೆ ಇಳಿದು ಸಮಸ್ಯೆ ಸೃಷ್ಟಿಸಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಶನಿವಾರ ಗುಜರಾತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ…

“ಮೋದಿ ರೂ. 500, ರೂ‌1000 ನೋಟು ರದ್ದು ಮಾಡಿದ್ದಾರೆ, ನಾವು ಕಳ್ಳ ದಾರಿಯಲ್ಲಿ ಏನೋ ಒಂದು ಮಾಡಿಬಿಡಬಹುದು ಎಂದು ಕೆಲವು ಬ್ಯಾಂಕ್ ಅಧಿಕಾರಿಗಳು ಭಾವಿಸಿದ್ದರು. ಆದರೆ ಮೋದಿ ಹಿಂದಿನ ಗೇಟುಗಳ ಬಳಿಯೂ ಕ್ಯಾಮೆರಾ ಇಟ್ಟ ವಿಷಯ ಅವರಿಗೆ ಗೊತ್ತಿಲ್ಲಾ, ಒಬ್ಬರನ್ನೂ ಬಿಡದೇ ಬಂಧಿಸುತ್ತೇವೆ” ಎಂದು ಪ್ರಧಾನಿ ಹೇಳಿದರು. ಈ ಹೇಳಿಕೆಯನ್ನು ಗಮನಿಸಿದರೆ ಭ್ರಷ್ಟ ಬ್ಯಾಂಕ್ ಅಧಿಕಾರಿಗಳನ್ನು ಖೆಡ್ಡಾಗೆ ಕೆಡವಲು ಮೋದಿ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಲ್ಲಿ ಸ್ಟಿಂಗ್ ಆಪರೇಷನ್ ಗಳು ನಡೆದಿರುವುದು ಸತ್ಯ ಎನ್ನುತ್ತಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಸ್ವತಃ ತಾವೇ ಮಾರುವೇಷಗಳಲ್ಲಿ ಬ್ಯಾಂಕುಗಳಿಗೆ ಭೇಟಿ ನೀಡಿ, ಅಕ್ರಮಗಳ ಗುಟ್ಟನ್ನು ರೆಕಾರ್ಡ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಒಂದು ಕಡೆ ಬ್ಯಾಂಕುಗಳ ಎದುರು ಜನರು ಸಾಲಿನಲ್ಲಿ ನಿಂತಿದ್ದರೆ, ಮತ್ತೊಂದು ಕಡೆ ಅಧಿಕಾರಿಗಳು ಕಾಳ ಧನಿಕರೊಂದಿಗೆ ಕೈಜೋಡಿಸಿ ಹೊಸ ನೋಟಿನ ಕಂತೆಗಳನ್ನು ತಲುಪಿಸಿರುವುದು ಮೋದಿ ಆಕ್ರೋಶಕ್ಕೆ ಕಾರಣವಾಗಿದೆ.

ಭ್ರಷ್ಟ ಬ್ಯಾಂಕ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದೇ ಕೇಂದ್ರದ ಮುಂದಿನ ತಂತ್ರ, ಇದರ ಭಾಗವಾಗಿಯೇ ಈಗಾಗಲೇ 400 ಸಿಡಿಗಳನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಈ ಸಿಡಿಗಳಲ್ಲಿ ಬ್ಯಾಂಕು ಅಧಿಕಾರಿಗಳ ಸಹಕಾರದಿಂದ ಕೆಲ ಪೊಲೀಸರು, ಭ್ರಷ್ಟ ಅಧಿಕಾರಿಗಳು ಮುಂತಾದ ಪ್ರಮುಖ ವ್ಯಕ್ತಿಗಳು ಹಳೆಯ ನೋಟುಗಳನ್ನು ಹೇಗೆ ಬದಲಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ದಾಖಲಾಗಿದೆ ಎನ್ನಲಾಗುತ್ತಿದೆ.