ಮೋದಿಯ ಆ ಒಂದು ಫೋನ್ ಕರೆ ಸಾವಿರಾರು ಭಾರತೀಯರ ರಕ್ಷಣೆಗೆ ನೆರವಾಯಿತು |News Mirchi

ಮೋದಿಯ ಆ ಒಂದು ಫೋನ್ ಕರೆ ಸಾವಿರಾರು ಭಾರತೀಯರ ರಕ್ಷಣೆಗೆ ನೆರವಾಯಿತು

2015 ರಲ್ಲಿ ಯುದ್ಧ ಪೀಡಿದ ಯೆಮೆನ್ ನಲ್ಲಿ ಸಿಲುಕಿದ್ದ ಸುಮಾರು 4 ಸಾವಿರಕ್ಕೂ ಹೆಚ್ಚು ಭಾರತೀಯರು ಮತ್ತು ಇತರೆ ದೇಶದ ನಾಗರಿಕರನ್ನು ಭಾರತ ಸರ್ಕಾರವು ‘ಆಪರೇಷನ್ ರಾಹತ್’ ನಡೆಸಿ ಸುರಕ್ಷಿತವಾಗಿ ಕರೆತಂದಿದ್ದು ತಿಳಿದದ್ದೇ. ಆದರೆ ಈ ಕಾರ್ಯಚರಣೆಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕುತೂಹಲಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

ಆಸಿಯಾನ್ ಪ್ರವಾಸಿ ಭಾರತೀಯ ದಿನಾಚರಣೆಯಲ್ಲಿ ಮಾತನಾಡುತ್ತಿದ್ದ ಸುಷ್ಮಾ ಸ್ವರಾಜ್ ಆ ಸಂದರ್ಭದಲ್ಲಿ ರಕ್ಷಣಾ ಕಾರ್ಯಚರಣೆಗೆ ಹಾದಿ ಹೇಗೆ ಸುಗಮವಾಯಿತು ಎಂಬುದನ್ನು ಬಿಚ್ಚಿಟ್ಟರು. ಯೆಮೆನ್ ಮೇಲೆ ಸೌದಿ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದ್ದರಿಂದ ಭಾರತೀಯರನ್ನು ರಕ್ಷಿಸಲು ಭಾರತೀಯ ಸೇನೆಗೆ ಕಷ್ಟವಾಗಿತ್ತಂತೆ. ಈ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರು ಸೌದಿ ದೊರೆ ಸಲ್ಮಾನ್ ಅವರೊಂದಿಗೆ ಮೋದಿಯವರು ಹೊಂದಿದ್ದ ಉತ್ತಮ ಬಾಂಧವ್ಯವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುವಂತೆ ಮೋದಿಯವರಿಗೆ ಸಲಹೆ ನೀಡಿದ್ದರಂತೆ.

ಸುಷ್ಮಾ ಸ್ವರಾಜ್ ಅವರ ಸಲಹೆಯಂತೆ ಸೌದಿ ದೊರೆ ಸಲ್ಮಾನ್ ಅವರಿಗೆ ಕರೆ ಮಾಡಿದ ನರೇಂದ್ರ ಮೋದಿ, ಯೆಮೆನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸಹಕಾರ ನೀಡುವಂತೆ ಕೋರಿದ್ದರು. ಇದಕ್ಕೆ ಅನುಕೂಲವಾಗುವಂತೆ ಒಂದು ವಾರ ಕಾಲ ಬಾಂಬ್ ದಾಳಿ ನಿಲ್ಲಿಸುವಂತೆ ಮನವಿ ಮಾಡಿದ್ದರು.

ಆ ಸಂದರ್ಭದಲ್ಲಿ ಭಾರತದ ಮನವಿಯನ್ನು ತಳ್ಳಿಹಾಕಲಾಗದೆ, ಬಾಂಬ್ ದಾಳಿಯನ್ನು ನಿಲ್ಲಿಸಲು ಸಾಧ್ಯವಾಗದ ಗೊಂದಲಕ್ಕೆ ಸಿಲುಕಿದ ಸೌದಿ ದೊರೆ, ಕೇವಲ ಮೋದಿಯವರ ಜೊತೆಗಿನ ಸ್ನೇಹದ ಕಾರಣಕ್ಕೆ 11 ದಿನಗಳ ಕಾಲ ಪ್ರತಿ ದಿನ ಎರಡೆರಡು ಗಂಟೆಗಳ ಕಾಲ ಭಾರತೀಯ ಸೇನೆಯ ರಕ್ಷಣಾ ಕಾರ್ಯಚರಣೆಗೆ ಅನುಕೂಲವಾಗುವಂತೆ ಬಾಂಬ್ ದಾಳಿ ನಿಲ್ಲಿಸಲು ನಿರ್ಧರಿಸಿದ್ದರು.

ಇದೇ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಯೆಮೆನ್ ನಲ್ಲಿನ ಆಡೆನ್ ಮತ್ತು ಸನಾ ಏರ್ ಪೋರ್ಟ್ ಗಳನ್ನು ತೆರೆಯುವಂತೆ ಅಲ್ಲಿನ ಆಡಳಿತಕ್ಕೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಯೆಮನ್ ಆಡಳಿತ, ಭಾರತೀಯರಿಗಾಗಿ ಏನು ಸಹಕಾರ ನೀಡಲೂ ತಾವು ಸಿದ್ಧ ಎಂದು ಹೇಳಿತು ಎಂದು ಸುಷ್ಮಾ ಸ್ವರಾಜ್ ನೆನಪಿಸಿಕೊಂಡರು.

ಇವರೆಲ್ಲರ ಸಹಕಾರದಿಂದಾಗಿ 4,800 ಭಾರತೀಯರು ಮತ್ತು ಇತರೆ ದೇಶಕ್ಕೆ ಸೇರಿದ 1,972 ಜನರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹಾಗೂ ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ನೇತೃತ್ವದ ‘ಆಪರೇಷನ್ ರಾಹತ್’ ಹೆಸರಿನಲ್ಲಿ ಸುರಕ್ಷಿತವಾಗಿ ಕರೆತರಲಾಯಿತು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!